ಬೆಂಗಳೂರು : ಉಪನೋಂದಣಿ ಕಚೇರಿಗಳಲ್ಲಿ 455 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಸಚಿವರು ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಸಾಂಗವಾಗಿ ನಡೆಯಲು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಪ್ರಾಮುಖ್ಯತೆ ನೀಡಲಾಗಿದೆ. ರಾಜ್ಯದಲ್ಲಿರುವ 256 ಉಪನೋಂದಣಿ ಕಚೇರಿಗಳಲ್ಲಿ ಒಟ್ಟು 1145 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 455 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಇಲಾಖೆ ಜತೆ ಚರ್ಚಿಸಿ ಹೆಚ್ಚುವರಿ ಹುದ್ದೆಗಳ ಭರ್ತಿಗೆ ಅನುಮತಿ ಪಡೆಯಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡರು ತಿಳಿಸಿದರು.
ನಕಲಿ ವೈದ್ಯರ ಹಾವಳಿಗೆ ಕ್ರಮ
ನಕಲಿ ವೈದ್ಯರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ. ನಕಲಿ ವೈದ್ಯರಿರುವ ಕಡೆಗಳಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಕಠಿಣ ಕ್ರಮಕೈಗೊಳ್ಳುವಂತೆ ಡಿಎಚ್ಒ(ಆರೋಗ್ಯ ಅಧಿಕಾರಿಗಳು)ಗಳಿಗೆ ಸೂಚನೆ ನೀಡಲಾಗಿದೆ. ಕೆಲವು ನಾಟಿ ವೈದ್ಯರು, ಪಾರಂಪರಿಕ ಚಿಕಿತ್ಸೆ ನೀಡುವ ವೈದ್ಯರೂ ಇದ್ದಾರೆ. ನಾಟಿ ಚಿಕಿತ್ಸೆ ನೀಡುವ ವೈದ್ಯರಿಗೂ ಸಂಘ ಸಂಸ್ಥೆಗಳು ಇವೆ. ಅವರನ್ನು ಸರ್ಕಾರದಡಿ ನೋಂದಾಯಿಸಿಕೊಳ್ಳಬೇಕೆಂಬ ಬೇಡಿಕೆಯೂ ಇದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.