ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಮೈಸೂರು, ಮೈಸೂರು-ಬೆಂಗಳೂರು ನಡುವೆ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಮೆಟ್ರೋ ಮಾದರಿಯಲ್ಲಿ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ನಿರ್ಧಾರ ಕೈಗೊಂಡಿದೆ.
ಪ್ರಯಾಣ ಮೂಲ ಸೌಕರ್ಯ ಹಾಗೂ ಆರ್ಥಿಕ ಅಭಿವೃದ್ಧಿ ಉತ್ತೇಜಿಸುವ ನಿಟ್ಟಿನಲ್ಲಿ ಇಂತದ್ದೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಉಭಯ ನಗರಗಳ ನಡುವೆ ಪ್ರಯಾಣಿಕರಿಗೆ ತ್ವರಿತ, ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣ ದೊರೆಯಲಿದೆ.
ಮೆಟ್ರೋ ಮಾದರಿಯ ರೈಲು ಸಂಚಾರ ವ್ಯವಸ್ಥೆಗೆ ಟ್ರ್ಯಾಕ್ ಗಳನ್ನು ನಾಲ್ಕುಪಟ್ಟು ಹೆಚ್ಚಿಸಬೇಕಾಗಿದೆ. ಇನ್ನು ಬಂಗಾರಪೇಟೆ-ಜೋಲಾರಪೇಟೆ, ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ವಿಭಾಗಗಳಲ್ಲಿ ರೈಲು ಹಳಿಯ ಚತುಷ್ಪಥ ಕಾಮಗಾರಿಗೆ ಅಂತಿಮ ಸ್ಥಳ ಸಮೀಕ್ಷೆಗೆ ರೈಲ್ವೆ ಮಂಡಳಿ ಹಸಿರು ನಿಶಾನೆ ತೋರಿದೆ. ಬೆಂಗಳೂರಿನ ಹೊರವರ್ತುಲ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೂ ಅನುಮೋದನೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.