ಕಾರ್ಮಿಕರ ಕಲ್ಯಾಣ ಯೋಜನೆಗೆ ಇಂಧನ ಸೆಸ್ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಅಧಿಕಾರಿಗಳಿಂದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಮುಖ್ಯಮಂತ್ರಿಗಳು ಸಮ್ಮತಿಸಿದ್ದಲ್ಲಿ ಇಂಧನ ಸೆಸ್ ಜಾರಿಯಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುವ ಸಾಧ್ಯತೆ ಇದೆ.
ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ವಿಧಿಸಲು ಚಿಂತನೆ ನಡೆಸಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 50 ಪೈಸೆಯಿಂದ ಒಂದು ರೂಪಾಯಿವರೆಗೆ ಹೆಚ್ಚಳ ಮಾಡಲು ಚಿಂತನೆ ನಡೆದಿದೆ. ಇದರಿಂದ ವಾರ್ಷಿಕ 2,200 ಕೋಟಿ ರೂ. ಸಂಗ್ರಹದ ನಿರೀಕ್ಷೆಯಿದ್ದು, 1.80 ಕೋಟಿ ಕಾರ್ಮಿಕರಿಗೆ ಹಲವು ಯೋಜನೆ ಕಲ್ಪಿಸಬಹುದು.
ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸದ ಕಾರ್ಮಿಕರು, ಬಿಸಿಯೂಟ ತಯಾರಕರು, ಕಮ್ಮಾರರು, ಎಲೆಕ್ಟ್ರಿಕ್ ಕೆಲಸ ಮಾಡುವವರು, ಸವಿತಾ ಸಮಾಜ, ಮಡಿವಾಳ ಸಮಾಜ, ಟೈಲರ್ ಗಳು, ಭೂರಹಿತಕ ಕಾರ್ಮಿಕರು ಸೇರಿದಂತೆ 42 ರೀತಿಯ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಲಾಗಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿದ್ದು, ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಅವರು ಒಪ್ಪಿದಲ್ಲಿ ಸಂಪುಟ ಸಭೆಯ ಮುಂದೆ ವಿಷಯ ಮಂಡಿಸಿ ಅನುಮೋದನೆ ಪಡೆಯಲಾಗುವುದು.
ಪ್ರಸ್ತುತ ಕರ್ನಾಟಕ ಮಾರಾಟ ತೆರಿಗೆ ಪೆಟ್ರೋಲ್ ಮೇಲೆ ಶೇಕಡ 25.94, ಡೀಸೆಲ್ ಮೇಲೆ ಶೇಕಡ 14.34 ರಷ್ಟು ಇದೆ. ಕೇಂದ್ರ ಅಬಕಾರಿ ತೆರಿಗೆ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 8.40 ರೂ., ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 14.80 ರೂ. ಇದೆ.