ಬೆಂಗಳೂರು : ನೊಂದ ಜೀವಗಳಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಯೋಜನೆಯೊಂದು ಆರಂಭಿಸಿದೆ. ನೊಂದ ಜೀವಗಳಿಗೆ 5 ಲಕ್ಷದವರೆಗೆ ಸಹಾಯಧನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಸಾಂತ್ವನ ಯೋಜನೆ’ ಆರಂಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ ನೊಂದ ಜೀವಗಳಿಗಾಗಿ ಸಾಂತ್ವನ ಯೋಜನೆಯನ್ನು ಜಾರಿಗೆ ತಂದು, ನೆಮ್ಮದಿಯ ಬದುಕು ಕಲ್ಪಿಸಲಾಗುತ್ತಿದೆ.
ಕೋಮು ಗಲಭೆ ಮತ್ತು ಕೋಮು ಹಿಂಸಾಚಾರದ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ರೂ. 5 ಲಕ್ಷದ ವರೆಗೆ ನಿಗಮದಿಂದ ಸಾಲ / ಸಹಾಯಧನ ನೀಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅರಿವು ಯೋಜನೆಯ ಮೂಲಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಲ ನೀಡುವ ಸಲುವಾಗಿ ರೂ.10 ಕೋಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕಾರ್ಪಸ್ ಫಂಡ್ ರೂಪದಲ್ಲಿ ಒದಗಿಸಿ, ಉನ್ನತ ಶಿಕ್ಷಣಕ್ಕೆ ನೆರವಾಗಿದ್ದೇವೆ. 45,45,749 ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಉಚಿತವಾಗಿ 2 ಜೊತೆ ಸಮವಸ್ತ್ರ ಮತ್ತು ಶೂ-ಸಾಕ್ಸ್ಗಳನ್ನು ವಿತರಿಸಲಾಗಿದೆ.ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳು ಕೂಡ ಇತರೆ ಮಕ್ಕಳಂತೆ ಶೂ ಧರಿಸಿಕೊಂಡು ಶಾಲೆಗೆ ಬರಬೇಕು, ಮಕ್ಕಳಲ್ಲಿ ಸಮಾನತೆಯ ಭಾವನೆ ಬೆಳೆದು ಶೈಕ್ಷಣಿಕ ಸಾಧನೆಗಳ ಕಡೆಗೆ ಹೆಚ್ಚು ಗಮನ ಹರಿಸುವಂತಾಗಬೇಕು ಎಂಬುದು ನಮ್ಮ ಆಶಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.