ಬೆಂಗಳೂರು : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ -10 ಹಲವು ವಿವಾದಗಳ ಮೂಲಕ ಭಾರಿ ಸುದ್ದಿಯಾಗುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳ ವರ್ತನೆ, ಅಶ್ಲೀಲ ಪದ ಬಳಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸ್ಪರ್ಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರನ್ನು ಆಗ್ರಹಿಸುತ್ತಿದ್ದಾರೆ.
ಟಾಸ್ಕ್ ವೇಳೆ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಹಾನಿಯಾಗಿದೆ. ಸ್ಪರ್ಧಿಗಳ ವರ್ತನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು . ನೇರವಾಗಿ ಬೆದರಿಕೆ ಹಾಕುವವರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಬಿಗ್ ಬಾಸ್ ಶೋ ನಲ್ಲಿ ಜೀವ ಬೆದರಿಕೆ, ಧಮ್ಕಿ, ಹಲ್ಲೆ ಯತ್ನದಂತಹ ಎಲ್ಲೆ ಮೀರಿದ ವರ್ತನೆಗಳು ನಡೆಯುತ್ತಿದೆ. ಸ್ಪರ್ಧಿಗಳು ಅತಿತೇಕವಾಗಿ ವರ್ತಿಸುತ್ತಿದ್ದಾರೆ, ಪೊಲೀಸರೇ ಬಿಗ್ ಬಾಸ್ ಶೋ ಮೇಲೆ ಒಂದು ಕಣ್ಣಿಡಿ ಎಂದು ಟ್ವಿಟರ್ ನಲ್ಲಿ ಆಗ್ರಹಿಸಲಾಗಿದೆ.ಇನ್ನೂ, ಕೆಲವರು ಸುದೀಪ್ ಅವರೇ ನಿಮ್ಮ ಘನತೆಗೆ ಈ ಶೋ ಅಲ್ಲ, ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೊರಬನ್ನಿ ಎಂದು ಮನವಿ ಮಾಡಿದ್ದಾರೆ.
ಇನ್ನೂ, ಶೋ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲರಾದ ಕೆವಿ ಪ್ರವೀಣ ಎಂಬುವವರು ದೂರು ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಭಾರತೀಯ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ ಇಮೇಲ್ ಹಾಗೂ ಅಂಚೆ ಮೂಲಕ ದೂರು ನೀಡಲಾಗಿದೆ.. ಈ ಕಾರ್ಯಕ್ರಮವು ಕೌಟುಂಬಿಕ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.