ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೀಗ ಡಿಸೆಂಬರ್ 21 ರಿಂದ ನೋಂದಣಿ ಆರಂಭವಾಗಲಿದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಯೋಜನೆಯನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು. ಯೋಜನೆಗೆ ಚಾಲನೆ ನೀಡುವ ದಿನಾಂಕವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದುಸುಮಾರು ಐದು ಲಕ್ಷ ಯುವಕರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.
ರಾಜ್ಯದ ಡಿಪ್ಲೋಮಾ, ಪದವೀಧರರಿಗೆ ರಾಜ್ಯ ಸರ್ಕಾರವು ಐದನೇ ಗ್ಯಾರಂಟಿ ಯೋಜನೆಯಾಗಿ ಯುವನಿಧಿ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆಯಡಿ ಡಿಪ್ಲೋಮಾ ಪದವಿ ಹೊಂದಿದವರಿಗೆ ಪ್ರತಿ ತಿಂಗಳು 1500 ರೂ, ಪದವೀಧರರಿಗೆ 3 ಸಾವಿರ ರೂ. ಭತ್ಯೆ ನೀಡಲಾಗುತ್ತದೆ.
ಯಾರಿಗೆಲ್ಲಾ ಸಿಗಲಿದೆ ಯುವನಿಧಿ ಯೋಜನೆ ಭತ್ಯೆ?
2022-2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಇದಕ್ಕಿಂತ ಹಿಂದೆ ಪದವಿ ಅಥವಾ ಡಿಪ್ಲೋಮಾ ಮುಗಿಸಿದವರಿಗೆ ಭತ್ಯೆ ಸಿಗಲ್ಲ ಎಂದು ವರದಿಯಾಗಿದೆ.
ಯುವನಿಧಿ ಯೋಜನೆಗೆ ಈ ದಾಖಲೆಗಳು ಕಡ್ಡಾಯ
ಆಧಾರ್ ಕಾರ್ಡ್, 10ನೇ ತರಗತಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ, ಡಿಪ್ಲೊಮಾ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ (ಅನ್ವಯವಾದಲ್ಲಿ) ಆದಾಯ ಪ್ರಮಾಣಪತ್ರ, ಮೊಬೈಲ್ ನಂಬರ್, ಬ್ಯಾಂಕ್ ಖಾತೆ ವಿವರಗಳು, ಸೆಲ್ಫ್ ಡಿಕ್ಲೆರೇಷನ್ ಪ್ರತಿ ಬೇಕಾಗುತ್ತದೆ.