ಉಡುಪಿ: ಜಾತಿ ಕಾರಣಕ್ಕಾಗಿ ನಾಗ್ಪುರದ ಹೆಡಗೇವಾರ್ ವಸ್ತು ಸಂಗ್ರಹಾಲಯಕ್ಕೆ ತನಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಅವರು ಯಾವಾಗ ಆರ್.ಎಸ್.ಎಸ್ ಗೆ ಬಂದಿದ್ದರು? ಎಂದು ಪ್ರಶಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಗೆ ಸಂಘದ ಬಗ್ಗೆ ತಪ್ಪು ಮಾಹಿತಿ ಇದೆ. ಅವರು ಸಂಘಕ್ಕೆ ಬಂದು ನೋಡಲಿ ಎಂದರು.
ಗೋಳಿಹಟ್ಟಿ ಶೇಖರ್ ಸಂಘಕ್ಕೆ ಯಾವಾಗ ಬಂದಿದ್ದರು? ಅವರು ಬಿಜೆಪಿ ಸದಸ್ಯರಾಗಿದ್ದರು. ಮಂತ್ರಿಯಾಗಿದ್ದರು. ಆರ್.ಎಸ್.ಎಸ್ ಶಾಖೆಗೆ ಯಾವಾಗ ಬಂದಿದ್ದರು? ಬಂದಿದ್ದರೆ ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಎಲ್ಲಾ ವರ್ಗದವರು ಒಟ್ಟಾಗಿ ಇರಬೇಕು ಎಂಬುದು ಸಂಘದ ಆಶಯ. ಭಾರತದ ಅಭುದಯಕ್ಕೆ ಇದೇ ಮಾರ್ಗ ಎಂದು ಆರ್.ಎಸ್.ಎಸ್ ನಂಬಿದೆ. ಗೂಳಿಹಟ್ಟಿ ಅವರಿಗೆ ತಪ್ಪು ಮಾಹಿತಿ ಇದೆ ಎಂದು ಗುಡುಗಿದರು.