ಬೆಳಗಾವಿ(ಸುವರ್ಣಸೌಧ): ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ NDRF ಅನುದಾನ ನಿರೀಕ್ಷಿಸಿ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಅರ್ಹ ರೈತರ ಖಾತೆಗೆ ತಲಾ 2 ಸಾವಿರ ರೂಪಾಯಿ ಪಾವತಿಸಲು ತೀರ್ಮಾನಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಗಮನ ಸೆಳೆಯುವ ಸೂಚನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಪರವಾಗಿ ಉತ್ತರ ನೀಡಿದ ಚೆಲುವರಾಯಸ್ವಾಮಿ, 186 ತಾಲೂಕು ತೀವ್ರ ಬರ ಪೀಡಿತ, ಮತ್ತು 27 ತಾಲೂಕು ಸಾಧಾರಣ ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ ಎಂದರು.
ಇನ್ಪುಟ್ ಸಬ್ಸಿಡಿಗೆ NDRF ಅಡಿಯಲ್ಲಿ 4,663 ಕೋಟಿ ರೂ. ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೂ ಅನುದಾನ ನಿರೀಕ್ಷಿಸಿ ಮೊದಲನೇ ಕಂತಾಗಿ ಅರ್ಹ ರೈತರ ಖಾತೆಗೆ ಎರಡು ಸಾವಿರ ರೂಪಾಯಿ ಪರಿಹಾರವನ್ನು ಡಿಬಿಟಿ ಮೂಲಕ ಪಾವತಿಸಲಾಗುವುದು ಎಂದು ಹೇಳಿದ್ದಾರೆ.