ಹಾಸನ: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಸಾಕಾನೆ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಾವನ್ನಪ್ಪಿದ್ದು, ಮಾವುತನ ಆಕ್ರಂದನ ಮುಗಿಲು ಮುಟ್ಟಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಆನೆ ಮೃತಪಟ್ಟಿದೆ. ಇಂದು ಅರ್ಜುನ ಆನೆಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಲವು ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಜನರು ಅರ್ಜುನ ಆನೆಯ ಅಂತಿಮ ದರ್ಶನ ಪಡೆದು ನಮನ ಸಲ್ಲಿಸುತ್ತಿದ್ದಾರೆ.
ಅರ್ಜುನ ಆನೆ 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಜಂಬೂ ಸವಾರಿಯಲ್ಲಿ ಸಾಗಿತ್ತು. 22 ವರ್ಷಗಳ ಕಾಲ ಮೈಸೂರು ದಸರಾದಲ್ಲಿ ಅರ್ಜುನ ಆನೆ ಹೆಜ್ಜೆಹಾಕಿತ್ತು. ಅರ್ಜುನ ಆನೆ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಮಾವುತ ವಿನುಗೆ ಅರ್ಜುನ ಆನೆ ಇನ್ನಿಲ್ಲ ಎಂಬುದು ಬರಸಿಡಿಲುಬಡಿದಂತಾಗಿದೆ.
ಅರ್ಜುನ ಆನೆ ಅಂತಿಮ ದರ್ಶನಕ್ಕೆ ಬಂದ ಮಾವುತ ವಿನು, ನನ್ನ ಆನೆ ಬದುಕಿಸಿಕೊಡಿ. ಇಲ್ಲವೇ ನನ್ನನ್ನೂ ಆನೆಯ ಜೊತೆ ಮಣ್ಣು ಮಾಡಿ ಎಂದು ಕಣ್ಣೀರಿಟ್ಟಿದ್ದಾನೆ. ಅರ್ಜುನನಿಗೆ ಏನೂ ಆಗಿಲ್ಲ ಎಂದು ಹೆಂಡತಿ-ಮಕ್ಕಳಿಗೆ ಹೇಳಿದ್ದೇನೆ ಎಂದು ಆನೆಯನ್ನು ತಂಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ….ಅರ್ಜುನ ಎದ್ದೇಳು, ಎದ್ದೇಳು ಎಂದು ಗೋಳಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.
ಅರ್ಜುನ ಆನೆಯ ಸಾವಿನಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಆಘಾತಕ್ಕೊಳಗಾಗಿದ್ದು, ಆನೆ ಅಂತಿಮ ದರ್ಶನಕ್ಕೆ ಆಗಮಿಸಿರುವ ಅರಣ್ಯಾಧಿಕಾರಿಗಳು ಕಣ್ಣೀರಿಟ್ಟಿದ್ದಾರೆ.