ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ವಿವಿಧ ಇಲಾಖೆಗಳ 13 ಅಧಿಕಾರಿಗಳ ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ರಾಜ್ಯದ 63 ಸ್ಥಳಗಳಲ್ಲಿ 200ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.
ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ದೂರು ಹಿನ್ನೆಲೆಯಲ್ಲಿ ಅಧಿಕಾರಿಗಳ ಮನೆ, ಕಚೇರಿಗಳು, ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪತ್ನಿಯ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಯಾದಗಿರಿ ಡಿ.ಹೆಚ್.ಒ. ಡಾ. ಪ್ರಭುಲಿಂಗ ಮಾನಕರ್ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸದಲ್ಲಿ ಮತ್ತು ಫಾರ್ಮೌಸ್ ಮೇಲೆ ದಾಳಿ ನಡೆಸಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಪಶು ವೈದ್ಯಕೀಯ ವಿವಿ ನೌಕರ ಸುನಿಲ್ ಕುಮಾರ್ ಮನೆ ಮತ್ತು ಕಾಂಪ್ಲೆಕ್ಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಚಂದ್ರಶೇಖರ, ಅರಣ್ಯ ಇಲಾಖೆ ಅಧಿಕಾರಿ ಮಾರುತಿ ಮನೆ ಮೇಲೆ ದಾಳಿ ನಡೆಸಲಾಗಿದೆ. ಮಾರುತಿ ಅವರಿಗೆ ಸೇರಿದ ಹೊಸಪೇಟೆ, ಗಂಗಾವತಿ, ಕಂಪ್ಲಿ ನಿವಾಸಗಳ ಮೇಲೆಯೂ ದಾಳಿ ಮಾಡಲಾಗಿದೆ.
ಮೈಸೂರಿನಲ್ಲಿ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹಾದೇವಸ್ವಾಮಿ ಮನೆ ಮೇಲೆ ದಾಳಿ ನಡೆಸಲಾಗಿದೆ. ಆದಾಯ ಮೇರಿ ಆಸ್ತಿಗಳಿಗೆ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಬೆಸ್ಕಾಂ ಜಾಗೃತ ದಳ ಅಧಿಕಾರಿ ಸುಧಾಕರ ರೆಡ್ಡಿ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರ ಮನೆ ಮೇಲೆ ದಾಳಿ ನಡೆದಿದೆ.