ಬೆಂಗಳೂರು : ನೀನೆಷ್ಟು ಟ್ಯಾಕ್ಸ್ ಕಟ್ಟುತ್ತೀಯ ಹೇಳು? ಎಂದು ರೈತನ ವಿರುದ್ಧ ಸಂಸದ ಡಿಕೆ ಸುರೇಶ್ ಗರಂ ಆಗಿದ್ದಾರೆ.
ಮಾಗಡಿ ತಾಲೂಕಿನ ಜನಸಂಪರ್ಕ ಸಭೆಯಲ್ಲಿ ಘಟನೆ ನಡೆದಿದೆ. ಬರ ಪರಿಹಾರದ ಕುರಿತ ಸದನದಲ್ಲಿ ಚರ್ಚೆ ಮಾಡಿ ಹೆಚ್ಚಿನ ಪರಿಹಾರ ಕೊಡಿಸಿ ಎಂದು ರೈತ ಹೇಳಿದ್ದಕ್ಕೆ ಸುರೇಶ್ ಸಿಟ್ಟಾಗಿದ್ದಾರೆ. ನಾವು ಪ್ರತಿ ದಿನ ಬೆಳಗ್ಗೆ ಜೆಡಿಎಸ್, ಬಿಜೆಪಿಯವರ ಕೈಯಲ್ಲಿ ಬೈಸಿಕೊಳ್ಳುತ್ತಿದ್ದೇವೆ. ಅದು ಕೊಡಿ, ಇದು ಕೊಡಿ ಅಂತಿದ್ದೀಯಾ. ನೀನು ಎಷ್ಟು ಟ್ಯಾಕ್ಸ್ ಕಟ್ಟುತ್ತಿದ್ದೀಯ ಹೇಳು? ಎಂದು ಗರಂ ಆಗಿದ್ದಾರೆ.
ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.
ಬರ ಪರಿಹಾರ ಕೊಡಿಸಿ ಎಂದು ಕೇಳಿದ್ದಕ್ಕೆ ಸಂಸದರು ಅಪಮಾನದ ಮಾತುಗಳನ್ನು ಆಡುತ್ತಿರುವುದು ಆ ಪಕ್ಷ ನಡೆದುಬಂದ ಸಂಸ್ಕೃತಿಯನ್ನು ತೋರಿಸುತ್ತದೆ. “ನೀನೆಷ್ಟು ಟ್ಯಾಕ್ಸ್ ಕಟ್ಟುತ್ತೀಯ ಹೇಳು?” ಎಂದು ಡಿಕೆ ಸುರೇಶ್ ಬಡ ರೈತನಿಗೆ ದರ್ಪದಿಂದ ಕೇಳುವ ಮೊದಲು, ತಾವು ಹಾಗೂ ತಮ್ಮ ಸಹೋದರರಾದ ಡಿ.ಕೆ. ಶಿವಕುಮಾರ್ ತೆರಿಗೆ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಆದಾಗ್ಯೂ “ಇಷ್ಟೆಲ್ಲಾ ಗ್ಯಾರಂಟಿ ಕೊಟ್ಟ ಮೇಲೂ ನೀವು ಕೇಳುತ್ತಲೇ ಇದ್ದೀರಿ, ರಸ್ತೆ ಮಾಡಿಸಿ, ಮೋರಿ ಮಾಡಿಸಿ ಅಂತಿದ್ದೀರಿ” ಎಂದು ಭಿಕ್ಷೆ ಹಾಕಿದವರ ರೀತಿ ಮಾತನಾಡಿ, ಕೊಟ್ಟದ್ದನ್ನು ತೆಕ್ಕೊಂಡು ತೆಪ್ಪಗೆ ಕೂರಬೇಕು ಎಂಬ ಕಾಂಗ್ರೆಸ್ನ ಪರಂಪರಾಗತ ಸಂಸ್ಕಾರವನ್ನು ಸಾಹೇಬರು ಮುಂದುವರಿಸಿದ್ದಾರಷ್ಟೆ ಎಂದು ಬಿಜೆಪಿ ಕಿಡಿಕಾರಿದೆ.