ದೋಸೆ ಎಂದ ಕೂಡಲೇ ಅಕ್ಕಿ ಹಿಟ್ಟಿನಿಂದ ಇಲ್ಲವೇ ರವೆಯಿಂದ ಮಾಡಿದ ದೋಸೆಗಳು ನೆನಪಾಗುತ್ತವೆ. ಮಸಾಲೆ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ ಮೊದಲಾದ ದೋಸೆಗಳ ಬಗ್ಗೆ ಹೆಚ್ಚಾಗಿ ಕೇಳಿರುತ್ತೀರಿ.
ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಗೋಧಿ ದೋಸೆಯ ಬಗ್ಗೆ ಇಲ್ಲಿದೆ ಮಾಹಿತಿ.
ಬೇಕಾಗುವ ಪದಾರ್ಥಗಳು: ಜವೆಗೋಧಿ ಅಥವಾ ಕೆಂಪು ಗೋಧಿ-1 ಕೆಜಿ, ಉಪ್ಪು- 2 ಚಮಚ, ಸೋಡಾ-1 ಚಮಚ, ವನಸ್ಪತಿ-300 ಗ್ರಾಂ ರೆಡಿಮಾಡಿ ಇಟ್ಟುಕೊಳ್ಳಿರಿ.
ಮಾಡುವ ವಿಧಾನ: ಗೋಧಿಯನ್ನು 3 ಗಂಟೆ ನೀರಿನಲ್ಲಿ ನೆನೆಯಲು ಇಡಿ. ನಂತರ ನೀರನ್ನು ಚೆಲ್ಲಿ 2 ಗಂಟೆ ಕಾಲ ಬಿಸಿಲಿನಲ್ಲಿ ಒಣಗಿಸಿ, ಗೋಧಿಯನ್ನು ಹಿಟ್ಟು ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಸೋಡಾ, ಉಪ್ಪು ಹಾಗೂ ನೀರು ಹಾಕಿ ಕಲೆಸಿರಿ. ಬೇಕಾದರೆ, ಒಣಮೆಣಸಿನ ಪುಡಿ ಹಾಗೂ ಬಿಳಿಮೆಣಸನ್ನು ಎರಡು ಚಮಚ ಹಾಕಿದರೆ ಖಾರ ಇರುತ್ತದೆ.
ಕಾವಲಿಯನ್ನು ಗ್ಯಾಸ್ ಮೇಲಿಟ್ಟು ಕಾಯಿಸಿ, ಚಮಚದಿಂದ ಹಿಟ್ಟು ತೆಗೆದು ದೋಸೆ ಹಾಕಿರಿ, ಕರಗಿಸಿದ ವನಸ್ಪತಿಯನ್ನು ಹಾಕಿ ಎರಡು ಕಡೆ ಹಾಕಿ, ದೋಸೆ ಕೆಂಪಗೆ ಕಾದ ಮೇಲೆ ತಟ್ಟೆಗೆ ಹಾಕಿಕೊಂಡು ಪಲ್ಯ, ಚಟ್ನಿಯೊಂದಿಗೆ ಸವಿಯಿರಿ.