ಬೆಂಗಳೂರು: ನಿಗಮ ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಸಭೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಮಧ್ಯಾಹ್ನ 2ಗಂಟೆಗೆ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮೊದಲ ಹಂತದ ಸಭೆ ನಡೆಸಲಿದ್ದು, ಸಭೆಯಲ್ಲಿ ನಿಗಮ ಮಂಡಳಿಗೆ ಇಂದೇ ಪಟ್ಟಿ ಫೈನಲ್ ಮಾಡುವ ಸಾಧ್ಯತೆ ಇದೆ.
ನಿಗಮ ಮಂಡಳಿಯಲ್ಲಿ ಶಾಸಕರಿಗೆ ಸ್ಥಾನ ನೀಡಬೇಕು ಎಂಬುದು ಸಿಎಂ ಸಿದ್ದರಾಮಯ್ಯ ನಿಲುವಾಗಿದ್ದು, ಕಾರ್ಯಕರ್ತರಿಗೂ ಸ್ಥಾನ ಸಿಗಬೇಕು ಎಂಬುದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಯೋಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 25 ನಾಯಕರ ಪಟ್ಟಿ ಸಿದ್ದಪಡಿಸಲಾಗಿದ್ದು, ಇಂದಿನ ಸಭೆಯಲ್ಲಿ ಫೈನಲ್ ಆಗುವ ಸಾಧ್ಯತೆ ಇದೆ.
ಶಾಸಕರಾದ ಬಸವರಾಜ್ ರಾಯರೆಡ್ಡಿ, ನರೇಂದ್ರ ಸ್ವಾಮಿ, ವಿನಯ್ ಕುಲ್ಕರ್ಣಿ, ರೂಪಾ ಶಶಿಧರ್, ರಾಜೇಗೌಡ, ರಘು ಮೂರ್ತಿ, ಗಣೇಶ್ ಹುಕ್ಕೇರಿ, ವಿಜಯಾನಂದ ಕಾಶಪ್ಪನವರ್, ಶಿವಲಿಂಗೇಗೌಡ, ಬಿ.ಕೆ.ಸಂಗಮೇಶ್ ಸೇರಿದಂತೆ ಹಲವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಅಲ್ಲದೇ 10-15 ಕಾರ್ಯಕರ್ತರಿಗೂ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.