ಬೆಂಗಳೂರು: ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಆತ್ಮಹತ್ಯೆ ತಡೆಗೆ ನಗರ ಪೊಲೀಸರು ಪ್ರತ್ಯೇಕ ಸಹಾಯವಾಣಿ ಸ್ಥಾಪಿಸಿದ್ದಾರೆ.
ಆಗ್ನೇಯ ವಿಭಾಗದಲ್ಲಿ ವೀ ಕೇರ್ ಸಹಾಯವಾಣಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರು 82779 46600 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದಾಗಿದೆ. ಸಹಾಯವಾಣಿಯಲ್ಲಿ ಆರು ಮಂದಿ ಮಹಿಳಾ ಪೊಲೀಸರನ್ನು ನೇಮಕ ಮಾಡಲಾಗಿದೆ.
ಇವರು ಪಾಳಿಯಲ್ಲಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಲಿದ್ದು, ನಿಮ್ಹಾನ್ಸ್ ವೈದ್ಯರಿಂದ ಪೊಲೀಸರಿಗೆ ತರಬೇತಿ ನೀಡಲಾಗಿದೆ. ವಾಟ್ಸಪ್ ಮೆಸೇಜ್, ಆಡಿಯೋ, ವಿಡಿಯೋ , ಕರೆ ಮಾಡಲು ಅವಕಾಶ ನೀಡಲಾಗಿದ್ದು, ಕರೆ ಮಾಡುವರ ಮಾಹಿತಿಯನ್ನು ಗೌಪ್ಯವಾಗಿ ಕಾಪಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಲದ ಕಿರುಕುಳ, ಲೈಂಗಿಕ ಕಿರುಕುಳ, ಜೀವನದಲ್ಲಿ ಜಿಗುಪ್ಸೆ ಅಥವಾ ಮರ್ಯಾದೆಗೆ ಅಂಜಿ ಸಾವಿನ ಹಾದಿ ಹಿಡಿಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.