ಥಾಣೆ: ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ದಂಪತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಘೋಡ್ ಬಂದರ್ ರಸ್ತೆಯಲ್ಲಿ ನಡೆದಿದೆ.
ಅಭಿಮನ್ಯು ಮಾದ್ವಿ (60) ಪತ್ನಿ ರಮಾಬಾಯಿ (55) ಮೃತರು. ಬೆಂಕಿ ಅವಘಡದಿಂದಾಗಿ ಮನೆಯಿಂದ ಹೊರಬರಲಾಗದೇ ಉಸಿರುಗಟ್ಟಿ ದಂಪತಿ ಸಾವನ್ನಪ್ಪಿದ್ದಾರೆ. ಕುಟುಂಬದ ಮೂವರನ್ನು ರಕ್ಷಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಅಂತಸ್ಥಿನ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದಾಗ ದಂಪತಿ ಹಾಗೂ ಕುಟುಂಬದ ಮೂವರು ಮೊದಲ ಮಹಡಿಯಲ್ಲಿದ್ದರು. ದಂಪತಿಯ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದು, ಮಲಗಿದ್ದಲ್ಲಿಯೇ ಉಸಿರು ಚಲ್ಲಿದ್ದಾರೆ.
ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಇದನ್ನು ಗಮನಿಸಿದ ಸ್ಥಳೀಯರು ಮನೆಯಲ್ಲಿದ್ದ ಉಳಿದ ಮೂವರನ್ನು ರಕ್ಷಿಸಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.