ಬೆಂಗಳೂರು: ನಾನಾ ಕಾರಣಗಳಿಂದ ಇದುವರೆಗೂ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಹಣ ಖಾತೆಗೆ ಸಂದಾಯವಾಗದ ಕುಟುಂಬಗಳಿಗೆ ಇನ್ನು ಮುಂದೆ ಕುಟುಂಬದ ಹಿರಿಯ ಮಹಿಳಾ ಸದಸ್ಯರ ಬ್ಯಾಂಕ್ ಖಾತೆಗೆ ಹಣವನ್ನು ನಗದು ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮನೆಯ ಯಜಮಾನಿ ಖಾತೆಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ರೂ., ಅನ್ನಭಾಗ್ಯ ಯೋಜನೆ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲು 170 ರೂ. ಹಣ ಸಂದಾಯ ಮಾಡಲಾಗುತ್ತಿದೆ. ಆದರೆ, ಮನೆಯೊಡತಿ ಘೋಷಣೆ ಮಾಡದ ಕಾರಣ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವುದು ಸೇರಿ ನಾನಾ ಕಾರಣಗಳಿಂದ 9 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಲ್ಲ. 7.67 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಸಂದಾಯವಾಗಿಲ್ಲ. ಇಂತಹ ಕುಟುಂಬಗಳಿಗೆ ಯೋಜನೆ ತಲುಪಿಸಲು ಆ ಎಲ್ಲಾ ಕುಟುಂಬಗಳ ಪಡಿತರ ಚೀಟಿಯಲ್ಲಿ ಹೆಸರಿರುವ ಹಿರಿಯ ಮಹಿಳಾ ಸದಸ್ಯರ ಖಾತೆಗೆ ಇನ್ನು ಮುಂದೆ ಡಿಬಿಟಿ ಮೂಲಕ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.