ಬಳ್ಳಾರಿ : ಬಸ್ ಕ್ಲಿಯರೆನ್ಸ್ ಸರ್ಟಿಫೀಕೇಟ್ ನೀಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಅಧೀಕ್ಷಕ ಚಂದ್ರಕಾಂತ್ ಗುಡಿಮನಿ ಮತ್ತು ಖಾಸಗಿ ವ್ಯಕ್ತಿ ಮಹ್ಮದ್ ರಾಜ್ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗ ಪೊಲೀಸ್ ಅಧೀಕ್ಷಕ ಎಂ.ಎನ್.ಶಶಿಧರ ಅವರು ತಿಳಿಸಿದ್ದಾರೆ.
ನಗರದ ಹವಂಭಾವಿ ರಸ್ತೆಯ ಅಶೋಕ ನಗರದ ನಿವಾಸಿ ಹೆಚ್.ಉಮೇಶ್ ತಂದೆ ವಿರುಪಾಕ್ಷಪ್ಪ ಎನ್ನುವವರು ಎಸ್.ಕೆ.ಬಿ ಟ್ರಾವೆಲ್ಸ್ನಲ್ಲಿನ 7 ಬಸ್ಗಳ ಮಾಲೀಕರಾಗಿದ್ದು, ಅದರ ಪೈಕಿ ಕೆಎ-07/ಬಿ-1177 ನಂಬರ್ ಬಸ್ನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಗ್ರಾಮದ ನಿವಾಸಿ ವಸಿಕೂರ್ ರೆಹಮಾನ್ಗೆ ಮಾರಾಟ ಮಾಡಿರುತ್ತಾರೆ. ಸದರಿ ಬಸ್ನ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲು ಬಳ್ಳಾರಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ರೂ.15,000 ಲಂಚದ ಹಣ ಬೇಡಿಕೆ ಇಟ್ಟಿರುತ್ತಾರೆ ಎಂದು ಬಳ್ಳಾರಿ ಕರ್ನಾಟಕ ಲೋಕಾಯುಕ್ತ ಠಾಣೆಯ ಗುನ್ನೆ ನಂ.7/2023 ಕಲಂ:7(a) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ರ ಅಡಿಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ ಎಂದು ಶಶಿಧರ ಅವರು ತಿಳಿಸಿದ್ದಾರೆ.
ನಂತರ ನ.16ರಂದು ರಾತ್ರಿ 10.30 ಕ್ಕೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಫಿರ್ಯಾದಿದಾರರಾದ ಹೆಚ್.ಉಮೇಶ್ ರವರಿಂದ ರೂ.15,000 ಗಳ ಲಂಚದ ಹಣವನ್ನು ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಅಧೀಕ್ಷಕ ಚಂದ್ರಕಾಂತ್ ಗುಡಿಮನಿ ಅವರು, ಖಾಸಗಿ ವ್ಯಕ್ತಿ ಮಹ್ಮದ್ ರಾಜ್ ಮೂಲಕ ಪಡೆಯುತ್ತಿದ್ದ ಸಂದರ್ಭದಲ್ಲಿ ಲಂಚದ ಹಣದ ಸಮೇತ ಇಬ್ಬರೂ ಸಿಕ್ಕಿಬಿದ್ದಿರುತ್ತಾರೆ. ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗ ಪೊಲೀಸ್ ಅಧೀಕ್ಷಕ ಎಂ.ಎನ್.ಶಶಿಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.