ಬೆಂಗಳೂರು: ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುತ್ತಿದ್ದಂತೆ ಅಸಮಾಧಾನಗೊಂಡಿರುವ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ವಿಪಕ್ಷ ನಾಯಕನ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ವಿಪಕ್ಷ ನಾಯಕರ ಆಯ್ಕೆಗಾಗಿ ಆಗಮಿಸಿರುವ ಬಿಜೆಪಿ ವೀಕ್ಷಕರಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದುಷ್ಯಂತ್ ಕುಮಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿಯನ್ನೂ ಮಾಡಿದ್ದಾರೆ.
ಹೈಕಮಾಂಡ್ ವೀಕ್ಷಕರ ಭೇಟಿ ಬಳಿಕ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರ ಬಗ್ಗೆ, ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ವಿಪಕ್ಷ ನಾಯಕನ ಸ್ಥಾನವನ್ನು ಉತ್ತರ ಕರ್ನಾಟದವರಿಗೆ ಕೊಡಬೇಕು ಎಂಬುದು ನಮ್ಮ ಬೇಡಿಕೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಎಲ್ಲಾ ನಾಯಕರು ಒಟ್ಟಾಗಿ ಚರ್ಚಿಸಿ ಒತ್ತಾಯಿಸಿದ್ದೇವೆ ಎಂದರು.
ಯಾಕೆ ಯಾವಾಗಲೂ ಮೈಸೂರು, ಮಂಗಳೂರು ಭಾಗದವರೇ ವಿಪಕ್ಷ ನಾಯಕರಾಗಬೇಕಾ? ಉತ್ತರ ಕರ್ನಾಟಕದವರು ಯಾಕೆ ಆಗಬಾರದು. ಈ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದವರಿಗೆ ಅನ್ಯಾಯವಾಗಬಾರದು. ನಮ್ಮಲ್ಲಿಯೂ ಶಾಕರಿದ್ದಾರೆ. ಆದರೆ ಅವರಿಗೆ ಬಹಿರಂಗವಾಗಿ ಮಾತನಾಡಲು ಧ್ವನಿಯಿಲ್ಲ. ನಾವೆಲ್ಲರೂ ಚರ್ಚಿಸಿ ಈ ಬೇಡಿಕೆ ಇಡುತ್ತಿದ್ದೇವೆ. ವಿಪಕ್ಷ ನಾಯಕನ ಸ್ಥಾನ ಉತ್ತರ ಕರ್ನಾಟಕದವರಿಗೆ ನೀಡಲಿ ಎಂದು ಆಗ್ರಹಿಸಿದರು.