ವಿಜಯಪುರ :ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿ-ಜೆಡಿಎಸ್ ನ ಹಲವು ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನಿಂದ ಮಾಜಿ ಶಾಸಕರು ಹಾಗೂ ಮುಖಂಡರ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ. ಕಾದುನೋಡಿ ಲೋಕಸಭಾ ಚುನಾವಣೆ ವೇಳೆಗೆ ಎಲ್ಲಾ ಸ್ವಚ್ಛವಾಗುರುತ್ತದೆ. ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿ, ಜೆಡಿಎಸ್ ನಿಂದ ಸಾಕಷ್ಟು ಮಾಜಿ ಶಾಸಕರು, ನಾಯಕರು ಕಾಂಗ್ರೆಸ್ ಗೆ ಬರಲು ಸಿದ್ದತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಅಧಿಕಾರಿಗಳ ವರ್ಗಾವಣೆ ಕುರಿತು ತಮ್ಮ ತಂದೆಗೆ ಸೂಚನೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆ ಮಾಡಲು ವಿಪಕ್ಷಗಳಿಗೆ ದೊಡ್ಡ ಆಹಾರವಾಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ. ನನಗೆ ಆ ಬಗ್ಗೆ ಗೊತ್ತಿಲ್ಲ, ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡುತ್ತೇನೆ. ವಿಡಿಯೋ ಮಾಧ್ಯಮದವರದ್ದು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಂದಿದೆ. ಈ ಹಿಂದೆ ನಂದೇ ಧ್ವನಿಯನ್ನು ಮಹಾರಾಷ್ಟ್ರದ ಒಬ್ಬ ಮಿಮಿಕ್ರಿ ಮಾಡಿದ್ದ. ಆಗ ಆತನನ್ನು ಅರೆಸ್ಟ್ ಮಾಡಿಸಿದ್ದೆವು. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಂದಿದೆ, ಬದಲಾವಣೆ ಮಾಡಬಹುದು ಎಂದರು.