ಹಾಸನ: ಹಾಸನದ ಅದಿ ದೇವತೆ ಹಾಸನಾಂಬೆ ದರ್ಶನ ಪ್ರಸಕ್ತ ವರ್ಷ ಸಂಪನ್ನವಾಗಿದ್ದು, ಇದೇ ವೇಳೆ ಮುಂದಿನ ವರ್ಷ ಹಾಸನಾಂಬೆ ದರ್ಶನದ ದಿನಾಂಕವನ್ನು ನಿಗದಿ ಮಾಡಲಾಗಿದೆ.
ಈ ವರ್ಷ 14 ದಿನಗಳ ಕಾಲ ನಡೆದಿದ್ದ ಹಾಸನಾಂಬೆ ದರ್ಶನ ಅವಕಾಶಕ್ಕೆ ಇಂದು ಮಧ್ಯಾಹ್ನ ವಿದ್ಯುಕ್ತ ತೆರೆ ಬಿದ್ದಿದೆ. ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ ಪೂಜೆ ಸಲ್ಲಿಸಲ್ಲಿಸಿದ ಬಳಿಕ ಮಧ್ಯಾಹ್ನ 12:23ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸಮ್ಮುಖದಲ್ಲಿ ಹಾಸನಾಂಬೆ ಗರ್ಭಗುಡಿಯ ಬಾಗಿಲು ಬಂದ್ ಮಾಡಲಾಯಿತು. ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸುವ ಮೂಲಕ ಬೀಗ ಹಾಕಲಾಯಿತು.
ಮುಂದಿನ ವರ್ಷ ಹಾಸನಾಂಬೆ ದೇವಿಯ ದರ್ಶನದ ದಿನಾಂಕವನ್ನು ಈ ವೇಳೆ ಪ್ರಕಟಿಸಲಾಗಿದ್ದು, ಮುಂದಿನ ವರ್ಷ ಅಕ್ಟೋಬರ್ 24 ರಿಂದ ನವೆಂಬರ್ 4ರವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಒಟ್ಟು 9 ದಿನಗಳ ಕಾಲ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.