ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಗೆಲುವಿಗೆ ಉಭಯತಂಡಗಳು ಕಾರ್ಯತಂತ್ರ ರೂಪಿಸಿವೆ. 2019 ರ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಎದುರು ಸೋತಿದ್ದ ಭಾರತ ತಂಡ ಫೈನಲ್ ಅವಕಾಶ ಕಳೆದುಕೊಂಡಿತ್ತು. ಆಗ ವಿರಾಟ್ ಕೊಹ್ಲಿ ನಾಯಕರಾಗಿದ್ದರು.
ಈಗ ರೋಹಿತ್ ಶರ್ಮಾ ನಾಯಕರಾಗಿದ್ದು, ಅವರಿಗೆ ಇಂದಿನ ಸೆಮಿಫೈನಲ್ ಅಗ್ನಿಪರೀಕ್ಷೆಯಾಗಿದೆ. ಅಂದಿನ ಸೋಲಿನ ಸೇಡು ತೀರಿಸಿಕೊಳ್ಳುವ ಜೊತೆಗೆ 12 ವರ್ಷಗಳ ನಂತರ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಡಲು ಭಾರತ ತಯಾರಿ ಮಾಡಿಕೊಂಡಿದೆ. ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಭರ್ಜರಿ ವಿಶ್ವಾಸದಲ್ಲಿರುವ ಭಾರತ ಇಂದಿನ ಪಂದ್ಯವನ್ನು ಗೆಲ್ಲಲು ಸಜ್ಜಾಗಿದೆ. ನ್ಯೂಜಿಲೆಂಡ್ ಕೂಡ ತಕ್ಕ ಸವಾಲು ನೀಡಲು ಕಾರ್ಯತಂತ್ರ ರೂಪಿಸಿದೆ.
ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ ನ 49 ಶತಕಗಳ ದಾಖಲೆಯನ್ನು ಸರಿಗಟ್ಟಿರುವ ವಿರಾಟ್ ಕೊಹ್ಲಿ ಇಂದು ಸಚಿನ್ ತವರಲ್ಲಿ 50ನೇ ಶತಕ ಗಳಿಸುವ ನಿರೀಕ್ಷೆ ಮೂಡಿಸಿದ್ದಾರೆ. ಅವರು ಶತಕ ಗಳಿಸಿದಲ್ಲಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 50 ಶತಕ ಗಳಿಸಿದ ಮೊಟ್ಟಮೊದಲ ಬ್ಯಾಟರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.