ಡೆಹ್ರಾಡೂನ್: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದೆ. ಇದರ ನಡುವೆ ಉತ್ತರಾಖಂಡ್ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮಹತ್ವದ ಹೆಜ್ಜೆ ಇಟ್ಟಿದೆ.
ಈ ಕುರಿತಾದ ಮಸೂದೆ ಅಂಗೀಕಾರಕ್ಕೆ ಉತ್ತರಾಖಂಡ ಬಿಜೆಪಿ ಸರ್ಕಾರ ಸಜ್ಜಾಗಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ರಂಜನಾ ದೇಸಾಯಿ ಅವರನ್ನೊಳಗೊಂಡ ಸಮಿತಿಯು ಮಸೂದೆ ರಚಿಸಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ವರದಿ ಸಲ್ಲಿಸಲಿದೆ. ದೀಪಾವಳಿ ಮುಗಿದ ನಂತರ ವಿಧಾನಸಭೆ ವಿಶೇಷ ಅಧಿವೇಶನ ಕರೆದು ಕರಡು ವಿಧೇಯಕ ಮಂಡಿಸಲಾಗುವುದು. ಮಸೂದೆಗೆ ಅಂಗೀಕಾರ ಪಡೆಯಲಾಗುವುದು. ಮಸೂದೆ ಅಂಗೀಕಾರವಾದಲ್ಲಿ ಏಕರೂಪ ನಾಗರಿಕ ಸಮಿತಿ ಜಾರಿಗೆ ತಂದ ದೇಶದ ಮೊದಲ ರಾಜ್ಯವೆಂಬ ದಾಖಲೆ ಉತ್ತರಾಖಂಡಕ್ಕೆ ಒಲಿಯಲಿದೆ.
ಎಲ್ಲಾ ಧರ್ಮೀಯರಿಗೂ ಮದುವೆ, ವಿಚ್ಛೇದನ, ಆಸ್ತಿ, ದತ್ತು ಮೊದಲಾದ ವಿಷಯಗಳಲ್ಲಿ ಒಂದೇ ಕಾನೂನು. ಎಲ್ಲಾ ಧರ್ಮೀಯರಿಗೂ ಬಹು ಪತ್ನಿತ್ವ ಸಂಪೂರ್ಣ ನಿಷಿದ್ಧ. ಲಿವಿಂಗ್ ಸಂಬಂಧ ನೋಂದಣಿ ಕಡ್ಡಾಯ. ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರ ಮತ್ತು ಪುತ್ರಿಗೆ ಸಮಾನ ಹಕ್ಕು. ಧಾರ್ಮಿಕ ಆಚರಣೆಗಳು, ನಂಬಿಕೆಗಳು, ಸಂಪ್ರದಾಯಗಳು ಸೇರಿ ಎಲ್ಲಾ ವಿಚಾರಗಳನ್ನು ವೈಯಕ್ತಿಕ ನೆಲಗಟ್ಟಿನಲ್ಲಿ ಮುಂದುವರೆಸಬಹುದು. ವಿವಾಹ ನೋಂದಣಿ, ವಿಚ್ಛೇದನ, ಆಸ್ತಿ ಹಕ್ಕು, ಮಕ್ಕಳ ಪಾಲನೆ ಮೊದಲಾದ ವೈಯಕ್ತಿಕ ಕಾನೂನುಗಳಲ್ಲಿ ಎಲ್ಲಾ ಧರ್ಮಗಳಿಗೂ ಅನ್ವಯವಾಗುವ ರೀತಿಯಲ್ಲಿ ಏಕರೂಪತೆ ತರಲು ಸಮಿತಿ ಶಿಫಾರಸು ಮಾಡಿದೆ ಎಂದು ಹೇಳಲಾಗಿದೆ.