ಪ್ರತಿಯೊಬ್ಬರಿಗೂ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನವನ್ನ ಬ್ಯಾಲನ್ಸ್ ಮಾಡೋದು ದೊಡ್ಡ ಚಾಲೆಂಜ್. ರೈಲಿನ ಎರಡು ಹಳಿಗಳ ಹಾಗೆ ಮನುಷ್ಯನ ವೃತ್ತಿ ಹಾಗೂ ವಯುಕ್ತಿಕ ಜೀವನ. ರೈಲು ಚಲಿಸಲು ಎರಡೂ ಹಳಿ ಎಷ್ಟು ಮುಖ್ಯವೋ, ಮನುಷ್ಯನ ಬದುಕಿನ ಬಂಡಿ ಸರಾಗವಾಗಿ ಸಾಗಲು ಇವೆರಡರ ಬ್ಯಾಲೆನ್ಸ್ ಅಷ್ಟೇ ಮುಖ್ಯ.
ಒಂದೊಮ್ಮೆ ವೃತ್ತಿ ಜೀವನದಲ್ಲಿ ತೊಡಕು ಇದ್ದರೆ ಅದರ ಪರಿಣಾಮ ಕುಟುಂಬದ ಮೇಲೂ ಬೀರುತ್ತದೆ. ಕುಟುಂಬದಲ್ಲಿ ಸಾಮರಸ್ಯ ಇಲ್ಲದೆ ಹೋದರೆ ವೃತ್ತಿ ಜೀವನದಲ್ಲಿ ಗಮನವಿಟ್ಟು ಕೆಲಸ ಮಾಡುವುದು ಅಸಾಧ್ಯ. ಈ ತಕ್ಕಡಿ ಸರಿಯಾಗಿ ತೂಗಬೇಕು ಅಂದ್ರೆ ಮುಖ್ಯವಾಗಿ ತಾಳ್ಮೆ ಬೇಕು.
ಮಹಿಳೆ ಅಥವಾ ಪುರುಷನ ವೃತ್ತಿ ಬದುಕಿನ ಯಶಸ್ಸಿಗೆ ಕುಟುಂಬದಲ್ಲಿ ನೆಮ್ಮದಿ ಇದ್ದರೆ ಮಾತ್ರ ಸಾಧ್ಯ. ಕುಟುಂಬದಲ್ಲಿ ಜವಾಬ್ದಾರಿ ಹಂಚಿಕೆ, ಹೊಂದಾಣಿಕೆ ಬಹಳ ಮುಖ್ಯ. ಕುಟುಂಬ ಸದಸ್ಯರು ಪ್ರತಿಯೊಬ್ಬರ ಕೆಲಸವನ್ನ ಗೌರವಪೂರ್ಣವಾಗಿ ನೋಡಬೇಕು.
ವೃತ್ತಿ ಜೀವನದಲ್ಲಿ ಎಷ್ಟೇ ಒತ್ತಡ ಅಥವಾ ಕಿರಿಕಿರಿ ಇದ್ದರೂ, ಅದನ್ನು ಆದಷ್ಟು ಮನೆಗೆ ಹೊತ್ತು ತರದೆ ಕಚೇರಿಯಲ್ಲೇ ಮರೆತು ಬರುವುದು ಒಳ್ಳೆಯದು. ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದರೆ, ಅವರಿಗೆ ನಿಮ್ಮ ವೃತ್ತಿಯ ಒತ್ತಡ ತಿಳಿದಿರುವುದಿಲ್ಲ. ಸಹಜವಾಗಿಯೇ ನಿಮ್ಮಿಂದ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಾರೆ. ಕಚೇರಿಯ ಸಮಸ್ಯೆಯನ್ನು ಮನೆಗೆ ತಂದು, ಮಕ್ಕಳ ಮನಸ್ಸನ್ನು ನೋಯಿಸಿ, ತಾವು ಪಶ್ಚಾತಾಪ ಪಡುವುದರ ಬದಲು ಅಂದಂದಿನ ಒತ್ತಡ, ಅಲ್ಲಲಿಯ ಸಮಸ್ಯೆ ಅಲ್ಲೇ ಬಿಟ್ಟು ಬರುವುದು ಒಳಿತು.