ಬೆಂಗಳೂರು: ಆರು ತಿಂಗಳಿಂದ ಪಡಿತರ ಪಡೆಯದ 3.47 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡ್ ಗಳು ಪತ್ತೆಯಾಗಿದ್ದು, ಇವುಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ.
ಈ ಮೂಲಕ ಪಡಿತರ ಹೊರತಾಗಿ ಇತರೆ ಸೌಲಭ್ಯಕ್ಕಾಗಿ ಕಾರ್ಡ್ ಪಡೆದುಕೊಂಡವರಿಗೆ ಶಾಕ್ ನೀಡಲು ಮುಂದಾಗಿದೆ. ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮೂಲದ ದಾಖಲೆಯಾಗಿ ಆಧಾರ್ ಮತ್ತು ಪಡಿತರ ಕಾರ್ಡ್ ಪರಿಗಣಿಸಲಾಗುತ್ತಿದೆ. ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆಗಳಿಗೆ ಪಡಿತರ ಚೀಟಿ ಪ್ರಮುಖ ಆಧಾರವಾಗಿದ್ದು, ಸರ್ಕಾರದ ಈ ಕ್ರಮದಿಂದ ಗ್ಯಾರಂಟಿ ಯೋಜನೆಗಳ ಕೆಲವು ಫಲಾನುಭವಿಗಳಿಗೂ ಸಂಕಷ್ಟ ಎದುರಾಗಲಿದೆ.
ರಾಜ್ಯದಲ್ಲಿ ಸುಮಾರು 1.27 ಕೋಟಿಗೂ ಅಧಿಕ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳಿದ್ದು, 4.37 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇವರಲ್ಲಿ ಕಳೆದ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದ 3,47,297 ಕಾರ್ಡ್ ದಾರರು ಇದ್ದಾರೆ. ಅಂತಹ ಕಾರ್ಡ್ ಗಳ ದತ್ತಾಂಶ ಸಂಗ್ರಹಿಸಿ ರದ್ದುಗೊಳಿಸಲು ಆದೇಶಿಸಲಾಗಿದೆ.
ಪಡಿತರ ಚೀಟಿ ಇದ್ದರೂ ರೇಷನ್ ಪಡೆಯದೆ ಕೆಲವರು ಚಿಕಿತ್ಸೆ ಇತರೆ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಿ ಪಡಿತರ ಪಡೆದ ಕಾರ್ಡ್ ದಾರರಿಂದ ವಿವರಣೆ ಪಡೆದು ಸೂಕ್ತ ಎನಿಸಿದರೆ ಕಾರ್ಡ್ ಮುಂದುವರೆಸಲಾಗುತ್ತದೆ. ಇಲ್ಲವಾದಲ್ಲಿ ರದ್ದು ಮಾಡಲಾಗುವುದು ಎಂದು ಹೇಳಲಾಗಿದೆ.