ಬೆಂಗಳೂರು: ಇತ್ತೀಚೆಗೆ ಕಲಬುರಗಿಯಲ್ಲಿ ಕೆ.ಪಿ.ಎಸ್.ಸಿ. ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ ಮಹಿಳೆಯಿಂದ ತಾಳಿ ತೆಗೆಸಿದ ಪ್ರಕರಣವನ್ನು ಕರ್ನಾಟಕ ಲೋಕಸೇವಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಘಟನೆ ನಡೆದ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಂದ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ.
ಪರೀಕ್ಷೆ ಸಂದರ್ಭದಲ್ಲಿ ತಾಳಿ, ಕಾಲುಂಗುರ ಧರಿಸಲು ಅವಕಾಶವಿದೆ. ಪರೀಕ್ಷಾ ಕೇಂದ್ರದವರು ಮತ್ತು ಅಭ್ಯರ್ಥಿಗಳು ಪಾಲಿಸಬೇಕಾದ ಸೂಚನೆಗಳಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದರೂ, ಒಂದು ಪರೀಕ್ಷಾ ಕೇಂದ್ರದಲ್ಲಿ ತಾಳಿ ತೆಗೆಸಿದ ಮಾಹಿತಿ ಬಂದಿದೆ. ಈ ಕುರಿತು ವಿವರಣೆ ನೀಡುವಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಹೇಳಿದ್ದಾರೆ.
ನವೆಂಬರ್ 4ರಂದು ನಡೆದ ಲೆಕ್ಕಸಹಾಯಕರ ಹುದ್ದೆಗಳ ಪರೀಕ್ಷೆಯಲ್ಲಿ ಕಲಬುರಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದ ಬಳಿ ಇದ್ದ ಸಿಬ್ಬಂದಿಯೊಬ್ಬರು ಮಹಿಳಾ ಅಭ್ಯರ್ಥಿಯ ತಾಳಿ ತೆಗೆಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.