ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಚುರುಕುಗೊಂಡಿದ್ದು ರಾಜ್ಯದ ವಿವಿಧೆಡೆ ಬೆಳ್ಳಂಬೆಳಗ್ಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಚಿಕ್ಕಮಗಳೂರು, ಕರಾವಳಿ ಪ್ರದೇಶದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬೆಳ್ಳಂಬೆಳಗ್ಗೆ ಧಾರಾಕಾರ ಮಳೆಯಾಗಿದ್ದರಿಂದ ಕೆಲಸ ಕಾರ್ಯಗಳಿಗೆ ತೆರಳುವವರು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ವಾಕಿಂಗ್ ಹೋಗುವ ಬಹುತೇಕರು ಕೂಡ ಮಳೆಯ ಕಾರಣ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಎರಡು ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮಂಡ್ಯ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹೇಳಲಾಗಿದೆ.