ಪಾಟ್ನಾ: ರಾಜ್ಯದಲ್ಲಿ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ(ಇಡಬ್ಲ್ಯುಎಸ್) ಕೋಟಾವನ್ನು ಶೇ 75 ಕ್ಕೆ ಏರಿಸುವ ಪ್ರಸ್ತಾವನೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಪುಟ ಮಂಗಳವಾರ ಅಂಗೀಕರಿಸಿದೆ.
ಬಿಹಾರ ಅಸೆಂಬ್ಲಿಯಲ್ಲಿ ನಿತೀಶ್ ಕುಮಾರ್ ಕೋಟಾವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಇಂದು ನಿತೀಶ್ ಕುಮಾರ್ ಅವರು ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇಕಡ 65 ಕ್ಕೆ ಮತ್ತು ಇಡಬ್ಲ್ಯೂಎಸ್‌ಗೆ ಮತ್ತೊಂದು ಶೇಕಡ 10 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದರು.
ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳ ಕೋಟಾವನ್ನು ಹೆಚ್ಚಿಸಲು ಅವರು ರಾಜ್ಯ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಲು ನಿರ್ಧರಿಸಿದ್ದಾರೆ.
ಮೊದಲೇ ಸಿದ್ಧತೆಗಳು ನಡೆದಿವೆ. ಹಾಗಾಗಿ ಜಾತಿ ಗಣತಿ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದ ಕೂಡಲೇ ನಿತೀಶ್ ಅವರ ಸಂಪುಟವು ಬಿಹಾರ ಮೀಸಲಾತಿ ಮಸೂದೆ 2023ಕ್ಕೆ ಅನುಮೋದನೆ ನೀಡಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಮೀಸಲಾತಿ ಮಿತಿಯನ್ನು ಶೇಕಡಾ 50 ಕ್ಕಿಂತ ಹೆಚ್ಚು ಹೆಚ್ಚಿಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಉಭಯ ಸದನಗಳಿಂದ ಮಸೂದೆಯನ್ನು ಅಂಗೀಕರಿಸಿದ ನಂತರ, ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಬಹುದು. ನಿತೀಶ್ ಕುಮಾರ್ ಅವರು ಇಂದು ವಿಧಾನ ಪರಿಷತ್ತಿನಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವ ಬಗ್ಗೆಯೂ ಮಾತನಾಡಿದ್ದರು.