ಬೆಂಗಳೂರು : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಜಮಾ ಆಗದ ಯಜಮಾನಿಯರು ತಪ್ಪದೇ ಕೆಲ ದಾಖಲೆಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಅರ್ಜಿ ಹಾಕಿದ್ರೆ ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯಾದ್ಯಂತ ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ 2 ಕಂತಿನ ಹಣ ಅರ್ಹ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿದೆ. ಆದರೆ ಅರ್ಜಿ ಸಲ್ಲಿಸಿದ್ರೂ ಈವರೆಗೆ ಹಣ ಬಾರದೇ ಇರುವ ಮಹಿಳೆಯರು ಪ್ರತಿದಿನ ದಾಖಲೆಗಳ ಪರಿಶೀಲನೆ ಬ್ಯಾಂಕುಗಳಿಗೆ ತೆರಳುತ್ತಿದ್ದಾರೆ. ಆದರೆ ಮುಖ್ಯವಾಗಿ ಹಣ ಬಾರದೇ ಇರಲು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡದಿರುವುದರಿಂದ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ.
ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡದಿರುವುದು, ಬ್ಯಾಂಕ್ ಪಾಸ್ ಬುಕ್ ನಲ್ಲಿರುವ ಹೆಸರಿಗೂ ಆಧಾರ್ ಕಾರ್ಡ್ ನಲ್ಲಿರುವ ಹೆಸರಿಗೂ ಹೊಂದಾಣಿಕೆಯಾಗದಿರುವುದು. 6 ತಿಂಗಳಿಂದ ಹೆಚ್ಚು ಕಾಲ ಬ್ಯಾಂಕ್ ವಹಿವಾಟು ನಡೆಯದಿರುವುದು. ಕೆವೈಸಿ ಮಾಡದಿರುವುದು ಮತ್ತಿತರ ಕಾರಣಗಳಿಂದ ಹಣ ವರ್ಗಾವಣೆ ತಡವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.