ಮೈಸೂರು: ರಾಜ್ಯದಲ್ಲಿ ಒಟ್ಟು 1.28 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿವೆ. ಇವರಲ್ಲಿ 1.10 ಕೋಟಿ ಕುಟುಂಬಕ್ಕೆ ಹೆಚ್ಚುವರಿ 5 ಕೆಜಿಯ ನಗದು ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ಒಂದು ದೇಶ ಒಂದು ಪಡಿತರ ಯೋಜನೆಗೆ ಚಾಲನೆ ನೀಡಿದ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, 18 ಲಕ್ಷ ಕಾರ್ಡುಗಳ ಪೈಕಿ 10 ಲಕ್ಷ ಕಾರ್ಡ್ ಗಳಿಗೆ ವಾರಸುದಾರರು ಇಲ್ಲ ಎಂದು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಪ್ರತಿ ತಿಂಗಳು ಸರಾಸರಿ 800 ಕೋಟಿ ರೂ.ನಂತೆ ವಾರ್ಷಿಕ 10,000 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಿಸಿದ್ದು, ಅನ್ನಭಾಗ್ಯ ಯೋಜನೆಗೆ ಹಣಕಾಸಿನ ಕೊರತೆ ಇಲ್ಲ. 2.95 ಲಕ್ಷ ಹೊಸ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಕಾರ್ಡ್ ವಿತರಣೆ ಪ್ರಕ್ರಿಯೆ ಮುಗಿದ ನಂತರ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 4.40 ಕೋಟಿ ಬಿಪಿಎಲ್ ಕಾರ್ಡ್ ದಾರರಿದ್ದು, 4 ಕೋಟಿ ಜನರಿಗೆ ಮಾತ್ರ ಕೇಂದ್ರ ಸರ್ಕಾರ ತಲಾ 5 ಕೆಜಿ ಅಕ್ಕಿ ನೀಡುತ್ತಿದೆ. ಉಳಿದ 40 ಲಕ್ಷ ಜನರಿಗೂ ಕೇಂದ್ರ ಅಕ್ಕಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.