ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ, ವಾಗ್ದಾಳಿ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಹಗುರ ಮಾತನಾಡುವುದು ಬೇಡ ದಾಖಲೆಗಳನ್ನು ಮುಂದಿಟ್ಟು ಮಾತನಾಡಲಿ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿಯವರು, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿದ್ದರೆ ಇಡಿ, ರಾ, ಸಿಬಿಐ ಇದೆಯಲ್ಲ ಅದರಿಂದ ತನಿಖೆ ನಡೆಸಲಿ. ರಾಜಕೀಯ ಕಾರಣಕ್ಕಾಗಿ ಪ್ರಧಾನಿ ಮೋದಿ ನಮ್ಮ ವಿರುದ್ಧ ಲಘುವಾಗಿ ಮಾತನಾಡುವುದು ಬೇಡ. ಮೊದಲು ದಾಖಲೆಗಳನ್ನು ಮುಂದಿಡಲಿ ಎಂದು ಗುಡುಗಿದರು.
ಕಳೆದ ಚುನಾವಣೆ ವೇಳೆ ಪ್ರಧಾನಿ ಮೋದಿಯವರು 48 ಬಾರಿ ರಾಜ್ಯಕ್ಕೆ ಬಂದು ಹೋದರು ಬಿಜೆಪಿಯವರು ಸೋತಿದ್ದಾರೆ. ಮೋದಿಯವರ ಹೇಳಿಕೆಗಳು ಸುಳ್ಳಿನ ಕಂತೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇದರಿಂದ ಹತಾಶರಾಗಿ ವಿಪಕ್ಷ ನಾಯಕರನ್ನೂ ಆಯ್ಕೆ ಮಾಡಿಲ್ಲ ಎಂದು ಹೇಳಿದರು.