ಬೆಂಗಳೂರು: ವಾರದ ಹಿಂದಷ್ಟೇ ಬೆಂಗಳೂರಿನ ಬೊಮ್ಮನಹಳ್ಳಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮೂರು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಗುಂಡೇಟಿಗೆ ಚಿರತೆ ಬಲಿಯಾಗಿತ್ತು. ಈ ಘಟನೆ ಬಳಿಕ ಈಗ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಎರಡು ಸ್ಥಳಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಕೂಡ್ಲು ಬಳಿ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದ್ದು, ಪ್ರತ್ಯಕ್ಷದರ್ಶಿಯೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಬ್ರೇಜ್ ಎಂಬುವವರು ಭಾನುವಾರ ರಾತ್ರಿ ಕೂಡ್ಲು ಗೆಟ್ ಬಳಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಚಿರತೆಯೊಂದು ಕಾಣಿಸಿಕೊಂಡಿದೆ.
ಕೂಡ್ಲು ಗೇಟ್ ಬಳಿಯ ಎ ಇ ಸಿ ಎಸ್ ಲೇಔಟ್ ಹಾಗೂ ಎಂ.ಎಸ್.ಧೋನಿ ಸ್ಕೂಲ್ ಬಳಿ ಚಿರತೆ ಕಂಡುಬಂದ ಮಾಹಿತಿ ಸಿಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ಎಲೆಕ್ಟ್ರಾನಿಕ್ ಸಿಟಿಯ ಚಿಕ್ಕತೋಗೂರಿನಲ್ಲಿಯೂ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ.
ಬೆಂಗಳೂರಿನ ಎರಡು ಸ್ಥಳಗಳಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮತ್ತೆ ತಲೆನೋವು ಶುರುವಾಗಿದೆ.