ಯಾದಗಿರಿ : ರಾಜ್ಯದ ವಿವಿಧ ನಿಗಮಗಳಲ್ಲಿ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಬಯಲಾಗಿದೆ.
ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದ್ದು, 16 ಆರೋಪಿಗಳ ವಿಚಾರಣೆ ವೇಳೆ ಆರೋಪಿಗಳ ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ನಡೆಸಲಾಗಿದೆ.
ಸರ್ಕಾರ ಎಂಬ ಹೆಸರಲ್ಲಿ ಸೇವ್ ಆಗಿದ್ದ ನಂಬರ್ನಿಂದ ವಾಟ್ಸಾಪ್ ಕಾಲ್ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಂಧನಕ್ಕೊಳಗಾದ ಆರೋಪಿ ನಂಬರ್ಗೆ ಪರೀಕ್ಷೆಯ ಹಿಂದಿನ ದಿನ ವಾಟ್ಸಾಪ್ ಆಡಿಯೋ ಕಾಲ್ ಬಂದಿದೆ. ಆಡಿಯೋ ಕಾಲ್ ಮಾಡಿ ಮಾಹಿತಿ ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದು, ಕರೆ ಮಾಡಿದ್ದು ಯಾರು..? ಯಾವ ನಂಬರ್..? ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ಪ್ರಮುಖ ಆರೋಪಿಗಳು ಬಲೆಗೆ ಬೀಳುವ ಸಾಧ್ಯತೆಯಿದೆ. ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಮಾಡಿದ ಆರೋಪದ ಮೇಲೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟು 16 ಜನರನ್ನು ಪೊಲೀಸರು ಬಂಧಿಸಿದ್ದರು.