ಉತ್ತರ ಪ್ರದೇಶದ ಮೀರತ್ ನಲ್ಲಿ ಕುಂದುಕೊರತೆ ನಿವಾರಣಾ ಕಾರ್ಯಕ್ರಮದ ವೇಳೆ ಅತ್ಯಾಚಾರ ಸಂತ್ರಸ್ತೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾಳೆ.
ಸರ್ಧಾನದಲ್ಲಿರುವ ‘ಸಂಪೂರ್ಣ ಸಮಾಧಾನ್ ದಿವಸ್’ಗೆ ಮಹಿಳೆ ಮತ್ತು ಅವರ ಕುಟುಂಬವು ತಮ್ಮೊಂದಿಗೆ ದಹನಕಾರಿ ವಸ್ತುಗಳನ್ನು ತಂದಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ.
ಪೊಲೀಸರು ಸುಡುವ ವಸ್ತುಗಳನ್ನು ಕುಟುಂಬದವರಿಂದ ಕಸಿದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.
ಸರೂರ್ಪುರ ಪೊಲೀಸ್ ಅಧಿಕಾರಿಗಳ ಪ್ರಕಾರ, ಘಟನೆಯು ಸುಮಾರು ಆರು ತಿಂಗಳ ಹಿಂದೆ ಸಂಭವಿಸಿದೆ, ಆ ಸಮಯದಲ್ಲಿ ಮಹಿಳೆ ಅಪ್ರಾಪ್ತಳಾಗಿದ್ದಳು. ಘಟನೆಯ ನಂತರ ಆಕೆ ತನ್ನ ಗ್ರಾಮದ ಯುವಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೂರು ದಾಖಲಾಗಿತ್ತು. ಆದರೆ, ತನಿಖೆಯ ವೇಳೆ ಆರೋಪಿ ಆ ಸಮಯದಲ್ಲಿ ಪಂಜಾಬ್ ನಲ್ಲಿದ್ದು, ಆ ಪ್ರದೇಶದಲ್ಲಿ ಇರಲಿಲ್ಲ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸರೂರ್‌ಪುರ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಸ್‌ಡಿಎಂ ಪಂಕಜ್ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.