ಬೆಂಗಳೂರು: ಅಂಗಾಂಗ ದಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂಗಾಂಗ ದಾನಿಗಳ ಅಂತ್ಯಕ್ರಿಯೆ ನೆರವೇರಿಸಲು ಸರ್ಕಾರ ಚಿಂತನೆ ನಡೆಸಿದೆ.
ತಮಿಳುನಾಡು ಮಾದರಿಯಲ್ಲಿ ಅಂಗಾಂಗ ದಾನಿಗಳ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ಚಿಂತನೆ ನಡೆದಿದೆ.
ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅಂಗಾಂಗ ದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ವ್ಯಕ್ತಿ ಮತ್ತು ಅವರ ಕುಟುಂಬದವರನ್ನು ಗುರುತಿಸಿ ಗೌರವಿಸಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರವೇ ಈ ಬಗ್ಗೆ ಸರ್ಕಾರದಿಂದ ನೀತಿ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಅಂಗಾಂಗ ದಾನದ ಮಹತ್ವ ಸಾರುವ ಉದ್ದೇಶದಿಂದ, ಮತ್ತಷ್ಟು ಜನರಿಗೆ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
‘’ಒಬ್ಬ ಅಂಗಾಂಗ ದಾನಿಯು 8 ಜೀವಗಳನ್ನು ಉಳಿಸಬಹುದು. ಜೀವದಾನದ ಈ ಉದಾತ್ತ ಕಾರ್ಯವು ಹೆಚ್ಚಿನ ಮೆಚ್ಚುಗೆಗೆ ಅರ್ಹವಾಗಿದೆ ಎಂದು ನಾವು ನಂಬುತ್ತೇವೆ ಮತ್ತು ಮರಣಾನಂತರ ತಮ್ಮ ಅಂಗಗಳನ್ನು ದಾನ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಆಲೋಚಿಸುತ್ತಿದೆ.
ನಾವು ಪ್ರಮಾಣಪತ್ರಗಳನ್ನು ನೀಡುವುದು ಮತ್ತು ಅಂಗಾಂಗ ದಾನಿಗಳ ಅಂತ್ಯಕ್ರಿಯೆಗಳನ್ನು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸುವುದು ಸೇರಿದಂತೆ ವಿಚಾರಗಳನ್ನು ಅನ್ವೇಷಿಸುತ್ತಿದ್ದೇವೆ. ಅಂಗಾಂಗ ದಾನದ ಮಹತ್ವವನ್ನು ಪ್ರಚಾರ ಮಾಡಲು ನಾವು ಶೀಘ್ರದಲ್ಲೇ ನೀತಿಯನ್ನು ರೂಪಿಸುತ್ತೇವೆ, ಇದು ಹೆಚ್ಚಿನ ಜನರನ್ನು ಭಾಗವಹಿಸಲು ಪ್ರೋತ್ಸಾಹಿಸುತ್ತದೆ.
ನೀವೂ ಸಹ ಈ ಉದ್ದೇಶಕ್ಕೆ ಸೇರಬಹುದು ಮತ್ತು ಇತರರು ಹೆಚ್ಚು ಫಲಪ್ರದ ಜೀವನವನ್ನು ನಡೆಸಲು ಸಹಾಯ ಮಾಡಬಹುದು. ಈಗಲೇ ಪ್ರತಿಜ್ಞೆ ಮಾಡಲು, http://jeevasarthakathe.karnataka.gov.in ಗೆ ಭೇಟಿ ನೀಡಿ’’ ಎಂದು ಸಚಿವರು ತಿಳಿಸಿದ್ದಾರೆ.
https://twitter.com/dineshgrao/status/1720332377166397768