ಬೆಂಗಳೂರು: ಕುಟುಂಬದವರ ಕಿರುಕುಳಕ್ಕೆ ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅ.26ರಂದು ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ಐಶ್ವರ್ಯ ಎಂಬ ಮಹಿಳೆ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ನಡೆದು ವಾರದ ಬಳಿಕ ಆತ್ಮಹತ್ಯೆಗೆ ಕಾರಣ ಬಯಲಾಗಿದೆ.
ಮೃತ ಮಹಿಳೆ ಐಶ್ವರ್ಯ ಪತಿ ಡೈರಿ ರಿಚ್ ಐಸ್ ಕ್ರೀಂ ಕಂಪನಿ ಮಾಲೀಕ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್, ಮೈದುನ ವಿಜಯ್ ಪತ್ನಿ ತಸ್ಮಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಐಶ್ವರ್ಯ ಆತ್ಮಹತ್ಯೆ ಬಳಿಕ ಪತಿ ಹಾಗೂ ಮನೆಯವರೆಲ್ಲ ಸೇರಿ ಗೋವಾ ಹಾಗೂ ಮುಂಬೈಗೆ ತೆರಳಿ ಭರ್ಜರಿ ಪಾರ್ಟಿಯನ್ನೂ ಮಾಡಿದ್ದರೆಂಬ ಆರೋಪ ಕೇಳಿಬಂದಿದೆ.
ಐದು ವರ್ಷಗಳ ಹಿಂದೆ ಐಶ್ವರ್ಯ ಹಾಗೂ ರಾಜೇಶ್ ವಿವಾಹವಾಗಿದ್ದರು. ಕುಟುಂಬದವರೇ ಸೇರಿ ನಿಶ್ಚಯಿಸಿದ್ದ ಮದುವೆಯಾಗಿತ್ತು. ಐಶ್ವರ್ಯ ಯುಎಸ್ ನಲ್ಲಿ ಎಂಬಿಎ ಮುಗಿಸಿ ಬೆಂಗಳೂರಿಗೆ ಬಂದು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತಿ ರಾಜೇಶ್ ಅವರ ಡೈರಿ ರಿಚ್ ಐಸ್ ಕ್ರೀಂ ಕಂಪನಿಯಲ್ಲಿ ಐಶ್ವರ್ಯ ಅವರ ತಂದೆ ಸುಬ್ರಮಣಿ ಅವರ ಸಹೋದರಿಯ ಗಂಡ ರವೀಂದ್ರ ಕೆಲಸ ಮಾಡುತ್ತಿದ್ದರು. ಆತನೇ ರಾಜೇಶ್ ಹಾಗೂ ಐಶ್ವರ್ಯ ವಿವಾಹವನ್ನು ಮಾಡಿಸಿದ್ದ. ಆದರೆ ಕೆಲ ವರ್ಷಗಳಿಂದ ಐಶ್ವರ್ಯ ತಂದೆ ಸುಬ್ರಮಣಿ ಹಾಗೂ ರವೀಂದ್ರ ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು. ಇದೇ ದ್ವೇಷಕ್ಕೆ ಐಶ್ವರ್ಯ ಹಾಗೂ ರಾಜೇಶ್ ನಡುವೆ ರವೀಂದ್ರ ಕುಟುಂಬದವರೇ ಹುಳಿಹಿಂಡಿದ್ದರು ಎನ್ನಲಾಗಿದೆ. ಅಲ್ಲದೇ ಐಶ್ವರ್ಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದರಂತೆ. ಇದೇ ಕಾರಣದಿಂದ ಐಶ್ವರ್ಯ ಪತಿ ಹಾಗೂ ಕುಟುಂಬದವರು ಕಿರುಕುಳ ನೀಡುತ್ತಿದ್ದರು. ಅಲ್ಲದೇ ಐಶ್ವರ್ಯಗೆ ವರದಕ್ಷಿಣೆ ಕಿರುಕುಳವನ್ನೂ ನೀಡುತ್ತಿದ್ದರಂತೆ. ತನ್ನದೇ ಸಂಬಳದಲ್ಲಿ ಐಶ್ವರ್ಯ ಪತಿಗೆ ಐಷಾರಾಮಿ ಬೈಕ್ ನ್ನು ಕೊಡಿಸಿದ್ದಳಂತೆ. ಆದರೂ ಪತಿಯ ಹಿಂಸೆ ತಾಳಲಾರದೇ ಮನನೊಂದ ಐಶ್ವರ್ಯ ಅ.26ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.