ಮಹೋಬಾ: ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನೇ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಸಬ್ ಇನ್ಸ್ಪೆಕ್ಟರ್ ಆಗಿರುವ ರಾಮ್ ಅವ್ತಾರ್ ಅವರಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದೆ. ಸಮವಸ್ತ್ರದಲ್ಲಿದ್ದ ಅಧಿಕಾರಿಗೆ ಮನಬಂದಂತೆ ಗೂಸಾ ನೀಡಲಾಗಿದೆ. ಮಹೋಬಾ ಜಿಲ್ಲೆಯ ಪನ್ವಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸೈಕಲ್ ನಲ್ಲಿ ಬರುತ್ತಿದ್ದ 13 ವರ್ಷದ ಬಾಲಕನ ಮೇಲೆ ಬಸ್ ಹರಿದು ಆತನ ಸಾವಿಗೆ ಕಾರಣವಾದ ಪರಿಣಾಮ ರೊಚ್ಚಿಗೆದ್ದ ಜನರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ರು. ಬಸ್ ಚಾಲಕನಿಗೆ ಶಿಕ್ಷೆ ವಿಧಿಸಬೇಕು ಹಾಗೂ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಬಾಲಕನ ಕುಟುಂಬ ಹಾಗೂ ಜನರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಸಾರ್ವಜನಿಕರಿಗೆ ರಸ್ತೆಯಲ್ಲಿ ಹೋಗಲು ಅನುವು ಮಾಡಿಕೊಡಲು ಮುಂದಾದ ಪೊಲೀಸ್ ಅಧಿಕಾರಿಯನ್ನೇ ರೊಚ್ಚಿಗೆದ್ದ ಪ್ರತಿಭಟಿಸುತ್ತಿದ್ದ ಗುಂಪು ಕೈಯಲ್ಲಿ ಹಿಡಿದಿದ್ದ ಕೋಲಿನಿಂದ ಹಲ್ಲೆ ಮಾಡಿದೆ.
ಪ್ರತಿಭಟಿಸುತ್ತಿದ್ದ ಗುಂಪಿನಿಂದ ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಥಳಿಸಿದ ಗುಂಪಿನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯನ್ನೇ ಥಳಿಸಿರುವುದು ತೀವ್ರ ಕಳವಳ ಮೂಡಿಸಿದೆ.