ಬೆಂಗಳೂರು : ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ಕುಡಿಯುವ ನೀರು ಸರಬರಾಜು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ನಗರದಲ್ಲಿನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಉಚಿತ ವಿದ್ಯುತ್, ಕುಡಿಯುವ ನೀರು ಬೇಕು ಎಂದು ಶಿಕ್ಷಣ ಇಲಾಖೆ ಬೇಡಿಕೆ ಇಟ್ಟಿತ್ತು. ಇಂದಿನಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯುತ್, ಕುಡಿಯುವ ನೀರನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಕನಿಷ್ಠ SSLC ವರೆಗೆ ಕನ್ನಡ ಮಾಧ್ಯಮದಲ್ಲಿ ಮಕ್ಕಳು ಓದಬೇಕು . ಇಂಗ್ಲಿಷ್ ಮಾಧ್ಯಮಗಳ ಮೇಲಿನ ವ್ಯಾಮೋಹ ಜಾಸ್ತಿ ಆಗುತ್ತಿದೆ. ಕನ್ನಡ ಶಾಲೆಯಲ್ಲಿ ಓದಿದರೆ ಕೆಲಸ ಸಿಗಲ್ಲ ಎಂಬ ತಪ್ಪು ಕಲ್ಪನೆ ಪೋಷಕರಲ್ಲಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.
ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಭಾಷೆ, ನೆಲ, ಜಲ ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಕೂಡ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡನಾಡು ತಾಯಿನಾಡು, ಕನ್ನಡ ಭಾಷೆ ನನ್ನ ತಾಯಿ ಭಾಷೆ. ಈ ನಾಡಿನ ಋಣ ತೀರಿಸಬೇಕಾದ್ರೆ ಕನ್ನಡ ನೆಲ, ಜಲ ಭಾಷೆ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.