ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಪ್ರದರ್ಶನ ಉತ್ತಮವಾಗಿಲ್ಲ. ಪಾಕಿಸ್ತಾನ ಕ್ರಿಕೆಟ್ ಟೀಂ ಸೋಲಿಗೆ ಕೆಟ್ಟ ಫೀಲ್ಡಿಂಗ್ ಕಾರಣವಾಗ್ತಿದೆ. ಆಟಗಾರರು ಫಿಟ್ ಆಗಿಲ್ಲದಿರುವುದೇ ಅವರು ಕೆಟ್ಟ ಫೀಲ್ಡಿಂಗ್ ಮಾಡಲು ಕಾರಣವಾಗ್ತಿದೆ. ವಿಶ್ವಕಪ್ ಟೀಂನಲ್ಲಿದ್ರೂ ಪಾಕಿಸ್ತಾನಿ ಆಟಗಾರರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಿಲ್ಲ ಎನ್ನುವ ಮಾತುಗಳು ಕೇಳಿ ಬರ್ತಿವೆ. ಈ ಮಧ್ಯೆ ಪಾಕ್ ಆಟಗಾರರು ಹೊಟೇಲ್ ಆಹಾರ ತ್ಯಜಿಸಿ, ಆನ್ಲೈನ್ ನಿಂದ ಆಹಾರ ತರಿಸಿಕೊಂಡು ತಿಂದ ಸುದ್ದಿಯೊಂದು ಹರಡಿದೆ.
ಟೀಂ ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧ ಕೊಲ್ಕತ್ತ ಈಡನ್ ಗಾರ್ಡನ್ ನಲ್ಲಿ ಸೆಣೆಸುವ ಮುನ್ನ, ಹೊಟೇಲ್ ಆಹಾರವನ್ನು ತಿರಸ್ಕರಿಸಿದೆ. ಟೀಂ ಪಾಕಿಸ್ತಾನ ತಂಗಿದ್ದ ಹೊಟೇಲ್ ಮೆನುವಿನಲ್ಲಿ ಕಬಾಬ್ ಇರಲಿಲ್ಲ. ಹಾಗಾಗಿ ಆಟಗಾರರು ಅಪ್ಲಿಕೇಷನ್ ಸಹಾಯದಿಂದ ಹೊರಗಿನ ಆಹಾರ ಆರ್ಡರ್ ಮಾಡಿದ್ದಾರೆ ಎಂಬ ಸುದ್ದಿಯಿದೆ. ಚಾಪ್, ಫಿರ್ನಿ, ಕಬಾಬ್, ಶಾಹಿ ತುಕ್ಡಾ ಮತ್ತು ಬಿರಿಯಾನಿ ಆರ್ಡರ್ ಮಾಡಿ ತಿಂದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪಾಕ್ ತಂಡ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್, ಆಟಗಾರರ ಫಿಟ್ನೆಸ್ ಬಗ್ಗೆ ಮಾತನಾಡಿದ್ದರು. ಅನೇಕ ವರ್ಷಗಳಿಂದ ಪಾಕ್ ಆಟಗಾರರು ಫಿಟ್ನೆಸ್ ಪರೀಕ್ಷೆಗೆ ಒಳಪಟ್ಟಿಲ್ಲ. ಹಾಗಾಗಿ ಅವರು ಕೆಟ್ಟ ಫೀಲ್ಡಿಂಗ್ ಮಾಡ್ತಿದ್ದಾರೆ ಎಂದಿದ್ದರು. ಇತ್ತೀಚಿಗೆ ಪಾಕಿಸ್ತಾನದ ಆಲ್‌ರೌಂಡರ್ ಶಾದಾಬ್ ಖಾನ್ ಕೂಡ ಇದೇ ರೀತಿ ಆರೋಪ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಾಕ್ ಸೋತ ಸಂದರ್ಭದಲ್ಲಿ ಮಾತನಾಡಿದ್ದ ಶಾದಾಬ್ ಖಾನ್, ಆಟಗಾರರು ಹೈದ್ರಾಬಾದ್ ನಲ್ಲಿ ಬಿರಿಯಾನಿ ತಿನ್ನುತ್ತಿದ್ದಾರೆ. ಇದ್ರಿಂದಾಗಿ ಅವರು ಮೈದಾನದಲ್ಲಿ ನಿಧಾನವಾಗಿದ್ದಾರೆ ಎಂದಿದ್ದರು.