ಬೆಂಗಳೂರು: ದಸರಾ ನಿಮಿತ್ತ ಕೆಎಸ್ಆರ್ಟಿಸಿ ಮೈಸೂರು -ಬೆಂಗಳೂರು ನಡುವೆ ಸಂಚರಿಸುವ ತಡೆರಹಿತ ಬಸ್ ಗಳ ಪ್ರಯಾಣ ದರವನ್ನು ಪ್ರತಿವರ್ಷದಂತೆ ಶೇಕಡ 20ರಷ್ಟು ಹೆಚ್ಚಳ ಮಾಡಿದ್ದು, ಈ ಅವಧಿ ಅಕ್ಟೋಬರ್ 30ಕ್ಕೆ ಮುಕ್ತಾಯವಾಗಿದೆ. ಮಂಗಳವಾರದಿಂದ ಹಿಂದಿನ ದರದಲ್ಲಿಯೇ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ.
ಕಳೆದ ನಾಲ್ಕು ದಶಕಗಳಿಂದ ಪ್ರತಿ ವರ್ಷ ದಸರಾ ನಿಮಿತ್ತ 10 ದಿನಗಳು ಅಥವಾ ಸೀಮಿತ ಅವಧಿಗೆ ಅನ್ವಯವಾಗುವಂತೆ ಮೈಸೂರು -ಬೆಂಗಳೂರು ನಡುವೆ ಸಂಚರಿಸುವ ದಸರಾ ವಿಶೇಷ ತಡೆರಹಿತ ಬಸ್ ಗಳಲ್ಲಿ ನಿಯಮಾವಳಿಯಂತೆ ಶೇಕಡ 20ರಷ್ಟು ಪ್ರಯಾಣದರ ಹೆಚ್ಚಳ ಮಾಡಲಾಗುತ್ತಿದೆ. ಸೀಮಿತ ಅವಧಿ ಮುಗಿದ ಕೂಡಲೇ ಈ ಪ್ರಯಾಣದರ ಸ್ಥಗಿತಗೊಂಡು ಹಿಂದಿನ ದರದಲ್ಲಿಯೇ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಹೇಳಲಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಸಂಚರಿಸುವ ಬಸ್ ಗಳಲ್ಲಿ ಒಂದು ಕಡೆ ಮಾತ್ರ ಪ್ರಯಾಣಿಕರ ದಟ್ಟಣೆ ಇರಲಿದೆ. ಅದೇ ಬಸ್ ಗಳು ಮೈಸೂರಿನಿಂದ ವಾಪಸ್ ಆಗುವಾಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಕಾರ್ಯಾಚರಣೆ ವೆಚ್ಚ ಸರಿದೂಗಿಸಲು ಮೊದಲಿನಿಂದಲೂ ಈ ಕ್ರಮ ಅನುಸರಿಸಲಾಗುತ್ತಿದೆ.
ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಸಂಚರಿಸುವ ತಡೆರಹಿತ ಬಸ್ ಗಳಿಗೆ ಟೋಲ್ ಶುಲ್ಕ ಅನ್ವಯವಾಗುತ್ತದೆ. ಎರಡು ಟೋಲ್ ದರಗಳಲ್ಲಿ ಏಕ ಮಾರ್ಗದಲ್ಲಿಯೇ ಏಕಾಏಕಿ 1,090 ರೂ. ಹೆಚ್ಚಳವಾಗಿದ್ದರಿಂದ ಪ್ರಯಾಣ ದರದೊಂದಿಗೆ ಟೋಲ್ ಶುಲ್ಕವನ್ನು ಸೇರಿಸಿ ದರ ಹೆಚ್ಚಳ ಮಾಡಲಾಗಿತ್ತು. ಈ ದರವು ಎಕ್ಸ್ ಪ್ರೆಸ್ ವೇನಲ್ಲಿ ಕಾರ್ಯಾಚರಣೆಯಾಗುವ ತಡೆರಹಿತ ಬಸ್ ಗಳಿಗೆ ಮಾತ್ರ ಅನ್ವಯವಾಗುತ್ತದೆ. ಎಕ್ಸ್ ಪ್ರೆಸ್ ಹೊರತುಪಡಿಸಿ ನೇರ ಮಾರ್ಗದಲ್ಲಿ ಸಂಚರಿಸುವ ವೇಗದೂತ ಬಸ್ ಗಳಲ್ಲಿ ಹಳೆಯ ಪ್ರಯಾಣ ದರವೇ ಚಾಲ್ತಿಯಲ್ಲಿ ಇದೆ. ರಾಜ್ಯ, ಅಂತರರಾಜ್ಯ ಮಾರ್ಗದ ಟೋಲ್ ಗಳಲ್ಲಿ ಟೋಲ್ ಶುಲ್ಕ ಹೆಚ್ಚಳವಾದಾಗ ಬಸ್ ಗಳಲ್ಲಿ ಪ್ರಯಾಣದರ ಹೆಚ್ಚಳವಾಗುವುದು ಹಿಂದಿನಿಂದ ನಡೆದುಕೊಂಡು ಬಂದ ಪ್ರಕ್ರಿಯೆಯಾಗಿದೆ.