ಬೆಂಗಳೂರು: ಮೊಟ್ಟೆ ದರ ಏರಿಕೆಯಾಗಿರುವ ಕಾರಣದಿಂದ ಕರ್ನಾಟಕ ಸಹಕಾರ ಕೋಳಿ ಒಕ್ಕೂಟ ಹಾಗೂ ಇತರೆ ಗುತ್ತಿಗೆದಾರರು ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ.
ಇದರಿಂದಾಗಿ ರಾಜ್ಯದಲ್ಲಿರುವ 65,911 ಅಂಗನವಾಡಿ ಕೇಂದ್ರಗಳ 41 ಲಕ್ಷ ಮಕ್ಕಳು, ಮಾತೃಪೂರ್ಣ ಯೋಜನೆಯಡಿ ಪೌಷ್ಟಿಕ ಆಹಾರ ಪಡೆಯುತ್ತಿರುವ ಗರ್ಭಿಣಿಯರು, ಬಾಣಂತಿಯರಿಗೆ ಮೊಟ್ಟೆ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಕರ್ನಾಟಕ ಸಹಕಾರ ಕೋಳಿ ಒಕ್ಕೂಟ ಬಹುತೇಕ ತಾಲೂಕುಗಳಲ್ಲಿ ಮೊಟ್ಟೆ ಪೂರೈಕೆ ಮಾಡುವ ಗುತ್ತಿಗೆ ಪಡೆದುಕೊಂಡಿದೆ. ದರ ಏರಿಕೆಯ ಕಾರಣದಿಂದ ಮೊಟ್ಟೆ ಪೂರೈಕೆ ಸ್ಥಗಿತಗೊಳಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ಶೇಕಡ 80ರಷ್ಟು ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಕೆ ಸ್ಥಗಿತಗೊಂಡಿದೆ.
ಸಾಗಾಣಿಕೆ ವೆಚ್ಚ, ಮೊಟ್ಟೆಯ ದರದಲ್ಲಿ ಏರಿಕೆಯಾಗಿದ್ದರಿಂದ ಮೊಟ್ಟೆ ಪೂರೈಸುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊಟ್ಟೆ ದರ ಏರಿಕೆ ಆಗುತ್ತಿರುವುದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮೊಟ್ಟೆ ಪೂರೈಕೆ ನಿಲ್ಲಿಸಲಾಗಿದೆ.
ಪ್ರತಿ ಮೊಟ್ಟೆಗೆ 5.75 ರಿಂದ 5.80 ರೂ. ನೀಡಲಾಗುತ್ತಿದೆ. ಒಂದು ತಿಂಗಳಿಂದ ಮೊಟ್ಟೆಯ ದರ 6.50 ರೂ.ನಿಂದ 7 ರೂ.ವರೆಗೆ ಏರಿಕೆಯಾಗಿದ್ದು, ಒಂದು ಮೊಟ್ಟೆಗೆ 1 ರೂ.ನಿಂದ 1.25 ರೂ.ನಷ್ಟವಾಗುತ್ತಿದೆ. ಈ ನಷ್ಟವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.
ಮೊಟ್ಟೆ ಪೂರೈಕೆ ಸ್ಥಗಿತವಾಗಿರುವದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಸ್ಥಳೀಯವಾಗಿ ಮೊಟ್ಟೆ ಖರೀದಿಸಿ ವಿತರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಿದ್ದಾರೆ.