ಬೆಂಗಳೂರು: ಇಂದು ಈ ವರ್ಷದ ಕೊನೇ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿವೆ. ರಾಜಧಾನಿ ಬೆಂಗಳೂರಿನ ಪ್ರಮುಖ ದೇವಾಲಯಗಳಾದ ಗವಿ ಗಂಗಾಧರೇಶ್ವರ, ಬನಶಂಕರಿ ದೇವಿ ದೇವಸ್ಥಾ ಸೇರಿದಂತೆ ಹಲವು ದೇವಾಲಯಗಳು ಮಧ್ಯಾಹ್ನದ ಬಳಿಕ ಬಾಗಿಲು ಮುಚ್ಚಲಿವೆ.
ಚಂದ್ರಗ್ರಹಣ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ಆರಂಭವಾಗಿದ್ದು, ನಗರದ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಹೋಮ-ಹವನಗಳು ನಡೆದಿವೆ. ಗಂಗಾಧರೇಶ್ವರನಿಗೆ ವಿಶೇಷ ಅಭಿಷೇಕ ನಡೆಸಲಾಗುತ್ತಿದೆ. ಬಳಿಕ ಬೆಳಿಗ್ಗೆ 11 ಗಂಟೆ ಬಳಿಕ ದೇವಸ್ಥಾನವನ್ನು ಬಂದ್ ಮಾಡಲಾಗುತ್ತಿದೆ.
ಗ್ರಹಣ ಮೋಕ್ಷದ ಬಳಿಕ ನಾಳೆ ಬೆಳಿಗ್ಗೆ ಶುದ್ಧಿಕಾರ್ಯದ ನಂತರದಲ್ಲಿ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.
ಇನ್ನು ಪ್ರಸಿದ್ಧ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಶಾಂತಿ ಪೂಜೆ ನೆರವೇರುತ್ತಿದ್ದು, ಶಾಂತಿ ಪೂಜೆ ಬಳಿಕ ಮಧ್ಯಾಹ್ನ 3 ಗಂಟೆಗೆ ಬನಶಂಕರಿ ದೇವಸ್ಥಾನ ಬಂದ್ ಆಗಲಿದೆ. ಶನಿವಾರ ಸಂಜೆ ಬನಶಂಕರಿ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ನಾಳೆ ಬೆಳಿಗ್ಗೆ 4 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದೆ.
ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ 6 ಗಂಟೆಯ ನಂತರ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.