ಕುಣಿಯಲು ಬಿಟ್ಟು ನೆಲ ಅಗೆಯುವ ನಿಮ್ಮ ‘ಮೈತ್ರಿದ್ರೋಹ’ಕ್ಕೆ ಏನು ಹೇಳುವುದು..? : ಸಿಎಂ ಸಿದ್ದರಾಮಯ್ಯಗೆ ‘HDK’ ತಿರುಗೇಟು

ಬೆಂಗಳೂರು : ಕುಣಿಯಲು ಬಿಟ್ಟು ನೆಲ ಅಗೆಯುವ ನಿಮ್ಮ ‘ಮೈತ್ರಿದ್ರೋಹ’ಕ್ಕೆ ಏನು ಹೇಳುವುದು ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕುಣಿಯಾರದವನು ನೆಲ ಡೊಂಕು ಎಂದನಂತೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಕುಣಿಯಲಾರದವನಿಗೆ ನೆಲ ಡೊಂಕು ಎನ್ನುವ ಮಾತೇನೋ ಸರಿ. ಆದರೆ, ಕುಣಿಯಲು ಬಿಟ್ಟು ನೆಲ ಅಗೆಯುವ ನಿಮ್ಮ ‘ಮೈತ್ರಿದ್ರೋಹ’ಕ್ಕೆ ಏನು ಹೇಳುವುದು Siddaramaiah ನವರೇ? ದೋಖಾ ಮಾಡುವುದೇ ದುರುದ್ದೇಶವಾಗಿದ್ದಾಗ ನೆಲವನ್ನು ಡೊಂಕು ಮಾಡುವುದು ಕಷ್ಟವೇ? ‘ಮೀರುಸಾದಿಕ’ನ ಆಧುನಿಕ ಅವತಾರಿ ಆಗಿರುವ ನಿಮಗೆ ಇಂಥ ಕ್ಷುದ್ರವಿದ್ಯೆಗಳೆಲ್ಲ ಕರತಲಾಮಲಕ. ಅದನ್ನೇ ನೀವು ಸುತ್ತಿಬಳಸಿ ಹೇಳುತ್ತಿದ್ದೀರಿ. ಧೈರ್ಯವಾಗಿ, ನೇರವಾಗಿ ಸತ್ಯ ಹೇಳಲು ಭಯವೇ? ಹೇಳಿ, ಕುಮಾರಸ್ವಾಮಿ ಸರಕಾರವನ್ನು ತೆಗೆದಿದ್ದು ನಾನೇ ಎಂದು ಹೇಳಲು ನಿಮಗೆ ಗುಂಡಿಗೆ ಸಾಲದೇ? ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.

ಸಿದ್ಧವನದಲ್ಲಿ ಹೆಣೆದ ಸಿದ್ದಸೂತ್ರ ನನಗೆ ಗೊತ್ತಿಲ್ಲದ ಚಿದಂಬರ ರಹಸ್ಯವೇ? ಬೆಕ್ಕು ಕಣ್ಮುಚ್ಚಿ, ಕದ್ದು ಹಾಲು ಕುಡಿದರೆ ಅನ್ಯರಿಗೆ ಕಾಣದು ಎನ್ನುವಷ್ಟು ಕಿಲಾಡಿತನವೇ? ಇದು ಕಿಲಾಡಿತನವೋ ಅಥವಾ ಕಿಡಿಗೇಡಿತನವೋ? ತಮ್ಮ ಇಂಥ ಸಿದ್ದಲೀಲೆಗಳು ನಮಗೇನೂ ಹೊಸತಲ್ಲ. ಯಡಿಯೂರಪ್ಪ ಅವರು ಕಾವೇರಿಯನ್ನು ಖಾಲಿ ಮಾಡಲಿಲ್ಲ ಸರಿ, ಜಾರ್ಜ್ ಅವರಿಗೆ ಹಂಚಿಕೆ ಆಗಿದ್ದ ನಿವಾಸದಲ್ಲಿ ನೀವು ಯಾಕೆ ಇದ್ದಿರಿ? ಪಾಪ.. ಅನ್ಯರ ಹಂಗೇಕೆ ಬೇಕಿತ್ತು ನಿಮಗೆ? ಮಾಜಿ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಭಂಗಲೆಯನ್ನೇ ಹಂಚಿಕೆ ಮಾಡುತ್ತಿದ್ದೆವು. ನೀವು ಕೇಳಬಹುದಿತ್ತು. ಕುತಂತ್ರ, ಕುಯುಕ್ತಿಯೇ ಸಿದ್ದಸೂತ್ರ ಆಗಿರುವಾಗ ಭಂಗಲೆ ಬಿಟ್ಟುಕೊಡುವಷ್ಟು ಉದಾರತೆ ನಿಮಗೆ ಎಲ್ಲಿಂದ ಬರಬೇಕು?

ಇಷ್ಟಕ್ಕೂ ಇನ್ನೊಬ್ಬರು ಇದ್ದ, ಅದರಲ್ಲೂ ನನ್ನ ಸಂಪುಟದಲ್ಲಿ ಸಚಿವರಾಗಿದ್ದವರಿಗೆ ಹಂಚಿಕೆ ಆಗಿದ್ದ ಭಂಗಲೆಯಲ್ಲಿ ಸೇರಿಕೊಳ್ಳುವುದು ಸಮಾಜವಾದಿಗೆ ಅದೆಂಥ ಸಭ್ಯತೆ? ಅದೆಂಥ ಶೋಭೆ? ಛೀ! ಛೀ!!
ವೆಸ್ಟ್ ಎಂಡ್ ನಲ್ಲಿ ಇದ್ದ ಕಾರಣವನ್ನು ನಾನು ಈಗಾಗಲೇ ತಿಳಿಸಿದ್ದೇನೆ, ನೂರಾರು ಸಲ. ಆದರೆ, ಜಾರ್ಜ್ ಮನೆಯಲ್ಲಿ ತಾವು ನಡೆಸಿದ ಸಿದ್ದಲೀಲೆಯನ್ನು ಬಹಿರಂಗ ಮಾಡುವಿರಾ? ನಿಮ್ಮ ಅಂತರಂಗವನ್ನು ಒಮ್ಮೆಯಾದರೂ ಬಹಿರಂಗ ಮಾಡಿ ಸಿದ್ದರಾಮಯ್ಯನವರೇ..ಎಂದು ಹೆಚ್ಡಿಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

https://twitter.com/hd_kumaraswamy/status/1716634686204887343

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read