ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಬಳಿಕ ಹಿಂಗಾರು ಮಳೆಯೂ ಕೈಕೊಟ್ಟಿದ್ದು, ಬರದ ಛಾಯೆ ಹೆಚ್ಚಾಗುತ್ತಿದೆ. ಹಿಂಗಾರು ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
ಇನ್ನು ಅರಬ್ಬಿ ಸಮುದ್ರದಲ್ಲಿ ಉಂಟಾದ ತೇಜ್ ಚಂಡಮಾರುತದಿಂದ ರಾಜ್ಯದಲ್ಲಿ ಮಳೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ರಾಜ್ಯದ ಮೇಲೆ ಚಂಡಮಾರುತ ಪರಿಣಾಮ ಬೀರುವುದಿಲ್ಲ. ಅರಬ್ಬಿ ಸಮುದ್ರದ ನೈರುತ್ಯ ಪ್ರದೇಶದಲ್ಲಿರುವ ಮಾರುತಗಳು ಓಮನ್ ಮತ್ತು ಯೆಮನ್ ಕಡೆಗೆ ಚಲಿಸುತ್ತಿವೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಹುತೇಕ ಮಳೆ ಕ್ಷೀಣಿಸಿದ್ದು, ಒಣಹವೆ ಹೆಚ್ಚಾಗಿದೆ. ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ಮೈಸೂರು, ಕಲಬುರಗಿ, ಚಿತ್ರದುರ್ಗ, ವಿಜಯಪುರ, ಉತ್ತರ ಕನ್ನಡ ಭಾಗದಲ್ಲಿ ಉಷ್ಣಾಂಶ ಹೆಚ್ಚಾಗಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿ ಮತ್ತು ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರಿನ ಕೆಲವೆಡೆ ಸಾಮಾನ್ಯ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.
ಮುಂಗಾರು ಕೈಕೊಟ್ಟಿದ್ದರಿಂದ ರೈತರು ಹಿಂಗಾರು ನಿರೀಕ್ಷೆಯಲ್ಲಿದ್ದರು. ಆದರೆ, ಹಿಂಗಾರು ಕೂಡ ಕ್ಷೀಣಿಸಿದ್ದರಿಂದ ಬರದ ತೀವ್ರತೆ ಹೆಚ್ಚಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.