ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದೆ. ಪ್ರೀತಿಸಿದ ಹುಡುಗನ ಜೊತೆ ಹೋಗಿದ್ದಕ್ಕೆ ಪುತ್ರಿಯನ್ನು ತಂದೆ ಹತ್ಯೆ ಮಾಡಿದ್ದಾನೆ. ಪರಪ್ಪನ ಅಗ್ರಹಾರದ ನಾಗನಾಥಪುರದ ಡಾಕ್ಟರ್ ಲೇಔಟ್ ನಲ್ಲಿ ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
17 ವರ್ಷದ ಬಾಲಕಿಯನ್ನು ಆಕೆಯ ತಂದೆ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ಮೂಲದ ಗಣೇಶ್ ಹತ್ಯೆ ಮಾಡಿದ್ದಾರೆ. ಶಾಲೆಗೆ ಹೋಗುವಾಗ ಗಣೇಶ್ ಪುತ್ರಿ ಪ್ರೀತಿಯ ಬಲೆಗೆ ಬಿದ್ದಿದ್ದಳು. ಈ ವಿಚಾರ ತಿಳಿದು ಪುತ್ರಿಯನ್ನು ನಾಗನಾಥಪುರಕ್ಕೆ ಕರೆತಂದು ಬಿಡಲಾಗಿತ್ತು.
ನಾಗನಾಥಪುರದಲ್ಲಿರುವ ಮಾವನ ಮನೆಯಿಂದ ಬಾಲಕಿ ಕಾಣೆಯಾಗಿದ್ದಳು. ಅಕ್ಟೋಬರ್ 14 ರಂದು ಪ್ರೀತಿಸಿದ ಹುಡುಗನ ಜೊತೆ ಮನೆ ಬಿಟ್ಟು ಹೋಗಿದ್ದಳು. ಅಕ್ಟೋಬರ್ 20ರಂದು ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ಕರೆ ತಂದಿದ್ದರು. ಠಾಣೆಯಿಂದ ಮಾವ ಶಾಂತಕುಮಾರ್ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು.
ನಿನ್ನೆ ಬೆಳಗ್ಗೆ ನಾಗನಾಥಪುರಕ್ಕೆ ಬಂದಿದ್ದ ಗಣೇಶ್ ಪತ್ನಿ ಹಾಗೂ ಪುತ್ರಿಯೊಂದಿಗೆ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಪುತ್ರಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಿಡಿಸಲು ಬಂದ ಪತ್ನಿ, ಬಾಮೈದ ಶಾಂತಕುಮಾರ್ ಮೇಲೆಯೂ ಹಲ್ಲೆ ಮಾಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.