ದಸರಾ ಅಂದರೆ ಮುಖ್ಯವಾಗಿ ಬೊಂಬೆ ಹಬ್ಬ. ಪಟ್ಟದ ಗೊಂಬೆಗಳನ್ನು ಕೂರಿಸುವ ಪದ್ಧತಿ ಅನೇಕರ ಮನೆಯಲ್ಲಿದೆ. ಸುಮಾರು 200 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಈ ಬೊಂಬೆ ಹಬ್ಬ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತಾಗಿಲ್ಲ. ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಈ ಬೊಂಬೆ ಹಬ್ಬವನ್ನು ದಸರಾ ಸಂದರ್ಭದಲ್ಲಿ ಆಚರಿಸುವುದುಂಟು.
ತವರು ಮನೆಯಿಂದ ತಂದ ಬೊಂಬೆಗಳನ್ನು ಪ್ರೀತಿಯಿಂದ ಸಿಂಗರಿಸಿ, ಅದರ ಜೊತೆಗೆ ಇನ್ನಷ್ಟು ದೇವರ ಬೊಂಬೆಗಳನ್ನು ಇಡುವುದು ವಾಡಿಕೆ. ಪುರಾಣದ ಕಥೆಗಳನ್ನು ಆಧರಿಸಿ ಬೊಂಬೆಗಳನ್ನು ಕೂರಿಸಿ, ವಿಶೇಷವಾಗಿ ಮಕ್ಕಳಿಗೆ ಪುರಾಣ ಪುಣ್ಯ ಕಥೆಗಳನ್ನು ಮನಮುಟ್ಟುವ ಹಾಗೆ ಅರ್ಥೈಸುವ ಉದ್ದೇಶ ಇದ್ದರೂ ಇದು ಕೇವಲ ಪುರಾಣಕ್ಕಷ್ಟೇ ಸೀಮಿತವಾಗಿಲ್ಲ.
ವರ್ತಮಾನದ ತಂತ್ರಜ್ಞಾನವನ್ನು ಆಧುನಿಕ ಬೊಂಬೆ ಹಬ್ಬಗಳಲ್ಲಿ ಸಮೀಕರಿಸಿ, ಕಾಲಮಾನಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ನಡೆದೇ ಇದೆ. ಮಹಿಳೆ ಎಂಥದ್ದೇ ಒತ್ತಡದಲ್ಲಿ ಇದ್ದರೂ, ಬಿಡುವು ಮಾಡಿಕೊಂಡು ಬೊಂಬೆಗಳನ್ನು ಓರಣವಾಗಿ ಜೋಡಿಸಿ, ಪೀಳಿಗೆಯಿಂದ ಪೀಳಿಗೆಗೆ ಕಥೆಗಳನ್ನು ಸ್ವಾರಸ್ಯಕರವಾಗಿ ದಾಟಿಸುವ ಕೆಲಸವನ್ನು ಅಷ್ಟೇ ಮುತುವರ್ಜಿಯಿಂದ ನಡೆಸಿಕೊಂಡು ಹೋಗುತ್ತಿರುವುದಕ್ಕೆ ಅಭಿನಂದಿಸಲೇ ಬೇಕು.