ನವದೆಹಲಿ : ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ 14 ನೇ ದಿನವೂ ಮುಂದುವರೆದಿದೆ. ವಿಶ್ವದ ಜೊತೆಗೆ ಭಾರತವೂ ಈ ಯುದ್ಧದ ಮೇಲೆ ಕಣ್ಣಿಟ್ಟಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಸರ್ಕಾರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.
ಯುದ್ಧ ಪೀಡಿತ ಪ್ರದೇಶದಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಸರ್ಕಾರದ ಕಾರ್ಯಾಚರಣೆಯ ಬಗ್ಗೆಯೂ ಮಾತನಾಡಿದ ಬಾಗ್ಚಿ, ಗಾಜಾದಿಂದ ನಾಗರಿಕರನ್ನು ಮರಳಿ ಕರೆತರುವುದು ಕಷ್ಟ ಎಂದು ಹೇಳಿದರು.
“ಈ ಮೊದಲು ಗಾಝಾದಲ್ಲಿ ಸುಮಾರು ನಾಲ್ಕು ಭಾರತೀಯ ಪ್ರಜೆಗಳಿದ್ದರು. ಈಗ ಅಲ್ಲಿ ಇರುವ ಭಾರತೀಯ ಪ್ರಜೆಗಳ ನಿಖರ ಸಂಖ್ಯೆ ನಮ್ಮಲ್ಲಿಲ್ಲ. ಗಾಜಾದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಮತ್ತು ಅವರು ಹೊರಬರುವುದು ಸ್ವಲ್ಪ ಕಷ್ಟ” ಎಂದು ಅವರು ಹೇಳಿದರು, “ಬೇಡಿಕೆಗೆ ಅನುಗುಣವಾಗಿ ವಿಮಾನಗಳನ್ನು ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದರು.
ತನ್ನ ನಾಗರಿಕರಿಗಾಗಿ ಭಾರತದ ‘ಆಪರೇಷನ್ ಅಜಯ್’
“ಇಲ್ಲಿಯವರೆಗೆ ಯಾವುದೇ ಭಾರತೀಯ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಸರ್ಕಾರದ ‘ಆಪರೇಷನ್ ಅಜಯ್’ ಅಡಿಯಲ್ಲಿ, ಟೆಲ್ ಅವೀವ್ನಿಂದ ಐದು ವಿಮಾನಗಳಲ್ಲಿ ಸುಮಾರು 1,200 ಭಾರತೀಯರು ಮತ್ತು 18 ನೇಪಾಳಿ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ಭಯಾನಕ ಭಯೋತ್ಪಾದಕ ದಾಳಿಯನ್ನು ಸರ್ಕಾರ ಬಲವಾಗಿ ಖಂಡಿಸಿದೆ ಮತ್ತು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಎದುರಿಸಲು ಅಂತರರಾಷ್ಟ್ರೀಯ ಸಮುದಾಯವು ಒಟ್ಟಾಗಿ ನಿಲ್ಲಬೇಕು ಎಂಬ ನಂಬಿಕೆ ಇದೆ ಎಂದು ಬಾಗ್ಚಿ ಹೇಳಿದರು.