ಶ್ವಾನ ತರಬೇತುದಾರನೊಬ್ಬ ತನ್ನ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ತಮ್ಮ ತರಬೇತಿ ಕೇಂದ್ರದಲ್ಲಿ ನಾಯಿಯನ್ನು ನೇಣು ಹಾಕಿ ಸಾಯಿಸಿದ್ದು ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಘಟನೆ ಸಂಭವಿಸಿದೆ.
ರವಿ ಕುಶ್ವಾಹ, ನೇಹಾ ತಿವಾರಿ ಹಾಗೂ ತರುಣ್ ದಾಸ್ ಎಂಬವರು ಸೇರಿಕೊಂಡು ಪಾಕಿಸ್ತಾನಿ ಬುಲ್ಲಿ ತಳಿಯ ಶ್ವಾನವನ್ನು ಕೊಂದಿದ್ದಾರೆ ಎನ್ನಲಾಗಿದೆ. ನಾಯಿ ಮಾಲೀಕ ನೀಲೇಶ್ ಜೈಸ್ವಾಲ್ ಎಂಬವರು ಉದ್ಯಮಿಯಾಗಿದ್ದು ನಾಲ್ಕು ತಿಂಗಳುಗಳ ಕಾಲ ತರಬೇತಿಗೆಂದು ಈ ಕೇಂದ್ರದಲ್ಲಿ ತಮ್ಮ ಶ್ವಾನವನ್ನು ಬಿಟ್ಟಿದ್ದರು ಎನ್ನಲಾಗಿದೆ.
ಜೈಸ್ವಾಲ್ ತಮ್ಮ ಶ್ವಾನವನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ನಿಮ್ಮ ಶ್ವಾನ ಸತ್ತು ಹೋಗಿದೆ ಅಂತಾ ತರಬೇತುದಾರರು ಹೇಳಿದ್ದಾರೆ. ಕೂಡಲೇ ಅನುಮಾನಗೊಂಡ ಜೈಸ್ವಾಲ್ ತರಬೇತಿ ಕೇಂದ್ರದಲ್ಲಿದ್ದ ಸಿಸಿ ಟಿವಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕುಶ್ವಾಹ, ತಿವಾರಿ ಹಾಗೂ ದಾಸ್ ನಾಯಿಯನ್ನು ಗೇಟ್ಗೆ ನೇತು ಹಾಕಿರುವ ದೃಶ್ಯ ಕಂಡು ಬಂದಿದೆ. ನಾಯಿ ಸುಮಾರು 10 ನಿಮಿಷಗಳ ಕಾಲ ಉಸಿರುಗಟ್ಟಿ ಸಾವನ್ನಪ್ಪಿದೆ . ಈ ಸಂಬಂಧ ಜೈಸ್ವಾಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶ್ವಾನವು ಹಿಂಸಾತ್ಮಕವಾಗಿತ್ತು. ತರಬೇತಿಯ ಭಾಗವಾಗಿ ನಾವು ಅದನ್ನು ಗೇಟ್ಗೆ ಕಟ್ಟಿ ಹಾಕಲು ಪ್ರಯತ್ನಿಸಿದ್ದೆವು ಎಂದು ಆರೋಪಿಗಳು ಸಬೂಬು ನೀಡಿದ್ದಾರೆ. ಆದರೆ ನಾಯಿಯ ಕುತ್ತಿಗೆಗೆ ಕಟ್ಟಿದ್ದ ಹಗ್ಗ ತುಂಬಾ ಬಿಗಿಯಾಗಿದ್ದ ಕಾರಣ ಅದು ಪ್ರಜ್ಞಾಹೀನವಾಗಿತ್ತು. ತರಬೇತುದಾರರು ಕೂಡಲೇ ಶ್ವಾನದ ಎದೆಯನ್ನು ಒತ್ತಿದ್ದಾರೆ. ಆದರೆ ಶ್ವಾನ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೂಡಲೆ ಶ್ವಾನವನ್ನು ಪಶು ವೈದ್ಯರ ಬಳಿಯೂ ಕರೆದುಕೊಂಡು ಹೋಗಲಾಗಿತ್ತು. ಆದರೆ ಅದು ಸತ್ತಿದೆ ಎಂದು ವೈದ್ಯರು ಘೋಷಿಸಿದ್ದಾರೆ ಎನ್ನಲಾಗಿದೆ.