ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ 2023-24ನೇ ಸಾಲಿನ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚಿಸಲಾಗಿದ್ದು, ಚಿತ್ರದುರ್ಗ ಜಿಲ್ಲೆಗೆ ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಇವರು ಆಯ್ಕೆಯಾಗಿರುತ್ತಾರೆ.
ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ಆಸಕ್ತ ರೈತರು ಬೆಳೆ ವಿಮೆಗೆ ನೋಂದಣಿ ಮಾಡಲು ಜೋಳ (ಮಳೆಯಾಶ್ರಿತ), ಸೂರ್ಯಾಕಾಂತಿ (ನೀರಾವರಿ) ಸೂರ್ಯಕಾಂತಿ (ಮಳೆಯಾಶ್ರಿತ) ರಾಗಿ (ನೀರಾವರಿ), ಕುಸುಬೆ (ಮಳೆಯಾಶ್ರಿತ) ಬೆಳೆಗಳಿಗೆ 2023ರ ಡಿಸೆಂಬರ್ 1 ಕೊನೆಯ ದಿನ ಮತ್ತು ಭತ್ತ (ನೀರಾವರಿ), ಮುಸುಕಿನಜೋಳ (ನೀರಾವರಿ), ಮುಸುಕಿನಜೋಳ (ಮಳೆಯಾಶ್ರಿತ), ಗೋಧಿ(ನೀರಾವರಿ) ಕಡಲೆ(ಮಳೆಯಾಶ್ರಿತ) ಬೆಳೆಗಳಿಗೆ 2023ರ ಡಿಸೆಂಬರ್ 15 ಕೊನೆಯ ದಿನವಾಗಿದೆ.
ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು, ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಆರ್ಥಿಕ ಸಂಸ್ಥೆಗಳು, ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ರೈತರನ್ನು ಬೆಳೆ ವಿಮೆಗೆ ನೋಂದಾಯಿಸಿದಾಗ ಬೆಳೆ ವಿಮೆ ಪ್ರಸ್ತಾವನೆಯನ್ನು ಹಾಗೂ ವಿಮಾ ಕಂತನ್ನು ನಿಗಧಿತ ಸಮಯದೊಳಗೆ ನಿಯಮಾನುಸಾರ ಅನುಷ್ಟಾನ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳತಕ್ಕದ್ದು, ನೋಂದಣಿ ಪ್ರಕ್ರಿಯೆಯ ಹಂತದಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ನಿರ್ಲಕ್ಷದಿಂದ ಯಾವುದೇ ಲೋಪ ದೋಷಗಳು ಉಂಟಾದಲ್ಲಿ ಅದರಿಂಗಾಗುವ ಬೆಳೆ ವಿಮೆ ಪರಿಹಾರ ವ್ಯಾಜ್ಯಗಳಿಗೆ ಸಂಬಂಧಿಸಿದ ಸಂಸ್ಥೆಗಳೆ ನೇರ ಹೊಣೆಗಾರರಾಗಿರುತ್ತಾರೆ.
ಆಸಕ್ತ ರೈತರು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ ಹಾಗೂ ಅನುಮೋದಿತ ಸಾರ್ವಜನಿಕ ಸೇವಾ ಕೇಂದ್ರಗಳಲ್ಲೂ ವಿಮೆಗೆ ನೋಂದಣಿ ಮಾಡಬಹುದಾಗಿದೆ. ವಿಮೆ ಸೌಲಭ್ಯ ಪಡೆಯಲು ಎಫ್ಐಡಿ (ಫ್ರೂಟ್ಸ್) ನೋಂದಣಿ ಹೊಂದಿರುವುದು ಕಡ್ಡಾಯ.
ಆಸಕ್ತ ರೈತ ಬಾಂದವರು ನಿಗಧಿತ ದಿನಾಂಕದೊಳಗೆ ಬೆಳೆ ವಿಮೆಗೆ ನೋಂದಾವಣೆ ಮಾಡಲು ವಿನಂತಿಸಿದೆ. ಅಂತಿಮ ಸಮಯದಲ್ಲಿ ಜನದಟ್ಟಣೆಯಿಂದಾಗಿ ನೋಂದಾಣಿಯಲ್ಲಿ ತಪ್ಪುಗಳು ಸಂಭವಿಸಿ, ವಿಮೆ ಪರಿಹಾರ ಬಾರದಿರುವ ಸಂಭವವಿರುತ್ತದೆ. ಇದಕ್ಕೆ ಅವಕಾಶ ಕೊಡದೇ ಸಕಾಲದಲ್ಲಿ ನೋಂದಾವಣೆ ಮಾಡಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.