ರಾಂಚಿ: ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯ ಲೋಟ್ವಾ ಅಣೆಕಟ್ಟಿನಲ್ಲಿ ಮಂಗಳವಾರ ಆರು ಶಾಲಾ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಬಂಕ್ ಮಾಡಿ ‘ಪಿಕ್ನಿಕ್’ಗೆ ತೆರಳಿದ್ದರು. ಅಧಿಕಾರಿಗಳ ಪ್ರಕಾರ, ಅವರು 12 ನೇ ತರಗತಿಯ ವಿದ್ಯಾರ್ಥಿಗಳು ಮತ್ತು 17 ಮತ್ತು 18 ವರ್ಷ ವಯಸ್ಸಿನವರಾಗಿದ್ದಾರೆ. ಘಟನೆಯು ಹಜಾರಿಬಾಗ್ ಪಟ್ಟಣದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ.
ಎಸ್ಪಿ ಮನೋಜ್ ರತನ್ ಚೋಥೆ ಅವರು, ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಶೇಖ್ ಭಿಖಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಉಪ ಅಧೀಕ್ಷಕ ರಾಜೀವ್ ಕುಮಾರ್ ಅವರು, ಒಟ್ಟು 7 ಮಕ್ಕಳು ಇಲ್ಲಿಗೆ ಬಂದಿದ್ದಾರೆ. ಅವರಲ್ಲಿ 6 ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಒಬ್ಬರು ಸುರಕ್ಷಿತವಾಗಿದ್ದಾರೆ. ಐದು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತರನ್ನು ರಜನೀಶ್ ಪಾಂಡೆ, ಸುಮಿತ್ ಕುಮಾರ್, ಮಯಾಂಕ್ ಸಿಂಗ್, ಪ್ರವೀಣ್ ಗೋಪೆ, ಇಶಾನ್ ಸಿಂಗ್ ಮತ್ತು ಶಿವಸಾಗರ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಸಮವಸ್ತ್ರದಲ್ಲಿಯೇ ಬಂದಿದ್ದಾರೆ. ಮನೆಯಿಂದ ಬಂದರೂ ಅವರು ತರಗತಿಗಳಿಗೆ ಹಾಜರಾಗದೆ ಅಣೆಕಟ್ಟಿಗೆ ಹೋಗಿದ್ದಾರೆ. ಒಟ್ಟು 12 ನೇ ತರಗತಿಯ 18 ವಿದ್ಯಾರ್ಥಿಗಳು ಇಂದು ಗೈರುಹಾಜರಾಗಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ಹೇಳಿದ್ದಾರೆ.
ವಿದ್ಯಾರ್ಥಿಗಳ ಸಾವಿಗೆ ಜಾರ್ಖಂಡ್ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಂತಾಪ ಸೂಚಿಸಿದ್ದಾರೆ.