
ಥಾಣೆ: ಅಪ್ರಾಪ್ತ ಬಾಲಕಿಯ ಮೇಲೆ 7 ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಸೋಮವಾರ ರಾತ್ರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮೂವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಅ. 2 ರಂದು ಥಾಣೆಯ ಭಿವಂಡಿ ಪಟ್ಟಣದಲ್ಲಿ ಭೀಕರ ಅಪರಾಧ ನಡೆದಿತ್ತು. 16 ವರ್ಷದ ಸಂತ್ರಸ್ತೆಗೆ ಪರಿಚಯವಿದ್ದ ಆರೋಪಿಯೊಬ್ಬ, ಖಾರ್ಬಾವ್ ರೈಲು ನಿಲ್ದಾಣದ ಬಳಿ ಬರುವಂತೆ ಹೇಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಮತ್ತು ಆಕೆ ಯಾರಿಗಾದರೂ ಹೇಳಿದರೆ ಭಯಾನಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ. ಹೀಗಾಗಿ ಘಟನೆ ನಡೆದ ತಕ್ಷಣ ಪೊಲೀಸರಿಗೆ ದೂರು ನೀಡಿರಲಿಲ್ಲ.
ಪ್ರಮುಖ ಆರೋಪಿ ಯಾವುದೋ ನೆಪ ಹೇಳಿ ಸಂತ್ರಸ್ತೆಯನ್ನು ಅದೇ ಸ್ಥಳಕ್ಕೆ ಕರೆದಿದ್ದಾನೆ. ಅಲ್ಲಿ ಇತರ ಆರು ಮಂದಿ ಅವನ ಸ್ನೇಹಿತರು, ರೈಲ್ವೇ ಹಳಿಗಳ ಬಳಿಯ ಕೋಣೆಯಲ್ಲಿ ಅವಳ ಮೇಲೆ ಅತ್ಯಾಚಾರ ಎಸಗಿದರು. ಅಪ್ರಾಪ್ತ ಬಾಲಕಿ ಧೈರ್ಯ ತಂದುಕೊಳ್ಳಲು ಸಮಯ ತೆಗೆದುಕೊಂಡಳು. ಅಂತಿಮವಾಗಿ ಈ ವಿಷಯದಲ್ಲಿ ಪೊಲೀಸ್ ದೂರು ನೀಡಿದ್ದಾಳೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು 7 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಬೇಕಾಗಿರುವ ಮೂವರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.